ಜಲ ಜೀವನ್ ಮಿಷನ್ ಯೋಜನೆ ಶೀಘ್ರ ಪೂರ್ಣಗೊಳಿಸಲು ಸೂಚನೆ

KannadaprabhaNewsNetwork |  
Published : Aug 21, 2025, 02:00 AM IST
ಚಿತ್ರ : 18ಎಂಡಿಕೆ3 : ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು.  | Kannada Prabha

ಸಾರಾಂಶ

ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ವಿರಾಜಪೇಟೆ ತಾ.ಪಂ. ಸಭೆ ನಡೆಯಿತು. ಅಧಿಕಾರಿಗಳು ಸಭೆಗೆ ಇಲಾಖಾವಾರು ಮಾಹಿತಿ ಒದಗಿಸಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ವಿರಾಜಪೇಟೆ ತಾಲೂಕು ಆಡಳಿತಾಧಿಕಾರಿಗಳು, ಜಿ.ಪಂ. ಉಪ ಕಾರ್ಯದರ್ಶಿ ಎಂ.ಸಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿರಾಜಪೇಟೆ ತಾ.ಪಂ. ಸಾಮಾನ್ಯ ಸಭೆ ನಡೆಯಿತು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಒಟ್ಟು 3 ಬ್ಯಾಚ್‌ಗಳಿಂದ 120 ಕಾಮಗಾರಿಗಳಿದ್ದು, 44 ಕಾಮಗಾರಿಗಳು ಮಾತ್ರ ಮುಕ್ತಾಯಗೊಂಡಿದೆ. ಇನ್ನುಳಿದ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಕ್ರಮವಹಿಸಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಉಚಿತ ಪಠ್ಯ-ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿ ಊಟದ ನೀಡುತ್ತಿದ್ದರೂ ಕೂಡ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಮಾತ್ರ ಇಳಿಕೆಯಾಗುತ್ತಿದೆ. ಎಸ್ಸೆಸ್ಸೆಲ್ಸಿ ಓದುತ್ತಿರುವ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನಹರಿಸಿ ಫಲಿತಾಂಶವು ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಡಿ ಜನರಿಗೆ ಸಿಗುತ್ತಿರುವ ಸೌಲಭ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 6 ಆಶ್ರಮ ಶಾಲೆಗಳಲ್ಲಿ 700ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು, ಎಲ್ಲ ಶಾಲೆಗಳು ಉತ್ತಮ ರೀತಿಯಲ್ಲಿ ನಿರ್ವಹಣೆ ಕೈಗೊಳ್ಳಲಾಗುತ್ತಿದೆ ಮತ್ತು ಹಾಡಿ ಜನರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಅವರು ಸಭೆಗೆ ಮಾಹಿತಿ ನೀಡಿದರು.ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಮೀನು ಹಿಡಿಯುವ ಕಿಟ್ ಹಾಗೂ ಮೀನು ಸಾಕಾಣಿಕೆ ಮಾಡುವ ರೈತರಿಗೆ ಅರ್ಹತೆ ಆಧಾರದ ಮೇಲೆ ಮೀನುಮರಿ ನೀಡಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಪಶು ಸಂಗೋಪನೆ ಇಲಾಖೆಯಿಂದ ಈಗಾಗಲೇ ರಾಸುಗಳಿಗೆ ಕಾಲು-ಬಾಯಿ ಜ್ವರದ ಲಸಿಕೆ, ಚರ್ಮಗಂಟು ನಿವಾರಣಾ ಲಸಿಕೆ ನೀಡಲಾಗಿದ್ದು, ತಾಲೂಕಿನ ವ್ಯಾಪ್ತಿಯಲ್ಲಿ ಹೊಸೂರು ಗ್ರಾಮ ಪಂಚಾಯಿತಿ ಹೊರತುಪಡಿಸಿ ಹಾಲು ಮಾರಾಟ ಕೇಂದ್ರಗಳು ಇಲ್ಲವಾದ ಕಾರಣ ಹಸು ಸಾಕಾಣಿಕೆ ಮಾಡುವವರ ಸಂಖ್ಯೆಯು ಕಡಿಮೆಯಾಗಿದೆ ಎಂದು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶರಾದ ಗಿರೀಶ್ ಅವರು ಮಾಹಿತಿ ನೀಡಿದರು.ಸೆಸ್ಕ್ ವಿಭಾಗದಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಸಂಬಂಧಿಸಿದಂತೆ ಕಂಬಗಳನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದರಿಂದ ರಸ್ತೆಗೆ ಹಾನಿಯಾಗುತ್ತಿರುವುದು ಕಂಡುಬಂದಿದ್ದು, ಇದರ ಕುರಿತು ಕ್ರಮವಹಿಸಲು ಎಂಜಿನಿಯರ್‌ಗಳಿಗೆ ತಿಳಿಸಿದರು.

ಮಾನವ-ಪ್ರಾಣಿ ಸಂಘರ್ಷ

ಅರಣ್ಯ ಇಲಾಖೆಯಿಂದ ವನ್ಯಜೀವಿಗಳ (ಆನೆದಾಳಿ, ಹುಲಿದಾಳಿ, ಬೆಳೆನಾಶ) ದಾಳಿಯಿಂದ ತಾಲೂಕಿನಲ್ಲಿ ಒಟ್ಟು 618 ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ ಹಲವು ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ ಎಂದು ವಲಯ ಅರಣ್ಯಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಲಾಯಿತು.ಕೃಷಿ, ಸಹಕಾರ, ಕಂದಾಯ, ಅಬಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ, ತೋಟಗಾರಿಕೆ, ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಸಭೆಗೆ ಮಹಿತಿ ನೀಡಿದರು.ಸಭೆಯಲ್ಲಿ ವಿರಾಜಪೇಟೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಸಿ.ಅಪ್ಪಣ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!