ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚನೆ: ಕೆ.ಎಸ್.ಆನಂದ್

KannadaprabhaNewsNetwork |  
Published : Jun 16, 2026, 01:30 AM IST
15ಕೆಕೆಡಿಯು5. | Kannada Prabha

ಸಾರಾಂಶ

ಕಡೂರುತಾಲೂಕಿನಲ್ಲಿ ಅನುಷ್ಟಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಿಗದಿತ ಅವಧಿಯೊಳಗೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನಲ್ಲಿ ಅನುಷ್ಟಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಿಗದಿತ ಅವಧಿಯೊಳಗೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಿಕ್ಕಮಗಳೂರು, ತರೀಕೆರೆ ಒಳಗೊಂಡು ಮುಖ್ಯವಾಗಿ ಕಡೂರು ತಾಲೂಕಿನ ಉದ್ದೇಶಿತ ಕಾಮಗಾರಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೇ.54 ರಷ್ಟು ಕಾಮಗಾರಿ ಪೂರ್ಣ ಗೊಂಡಿದೆ. ಕೆಲ ತಾಂತ್ರಿಕ ಅಡಚಣೆಯಿಂದ ಕಾಮಗಾರಿ ಪ್ರಗತಿ ಕುಂಠಿತವಾಗಿದೆ. 920 ಕಿ.ಮೀ ಪೈಪ್ ಲೈನ್ ಅಳವಡಿಸುವ ಕಾಮಗಾರಿ ₹900 ಕೋಟಿ ವೆಚ್ಚದಲ್ಲಿ ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲೂಕಿನಲ್ಲಿ ನಡೆಯುತ್ತಿದೆ. ಪೈಪ್ ಲೈನ್ ನ ಶೇ.75 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಟ್ಯಾಂಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆ, ಖಾಸಗಿ ಜಮೀನಿನ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಿಕೊಳ್ಳಬೇಕು. ಈ ಕಾಮಗಾರಿಯಲ್ಲಿ 41 ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಬೇಕಿದೆ. 12 ಕಡೆಗಳಲ್ಲಿ ರೈಲ್ವೆ ಕ್ರಾಸಿಂಗ್ ಬರಲಿದ್ದು ಇದಕ್ಕಾಗಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅರಣ್ಯ ಇಲಾಖೆ ಸಮಸ್ಯೆ ಬಗ್ಗೆ ಅರಣ್ಯ ಸಚಿವರ ಒಪ್ಪಿಗೆಗೆ ಕಾಯಲಾಗುತ್ತಿದೆ. ಭದ್ರಾ ನೀರನ್ನು ತಾಲೂಕಿನ ಎಲ್ಲ ಗ್ರಾಮಗಳಿಗೆ ನೀಡುವ ಕಾಮಗಾರಿ ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಸಬೇಕು ಎಂದರು.

ತಾಲೂಕಿನ ಭದ್ರಾ ಮೇಲ್ದಂಡೆ ಯೋಜನೆ ಅಡಿ ವಿಶ್ವೇಶ್ವರಯ್ಯ ಜಲ ನಿಗಮದಿಂದ ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ 60 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಜುಲೈನಲ್ಲಿ ಚಿತ್ರ ದುರ್ಗ ಚಾನೆಲ್ ಮೂಲಕ ಕಡೂರು ವಿಧಾನಸಭಾ ಕ್ಷೇತ್ರದ 23 ಕೆರೆಗಳಿಗೆ ನೀರು ತುಂಬಲಿದೆ. ಈ ಕಾಮ ಗಾರಿ ಮುಗಿದರೆ ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೆಳೆಯಲು ನೀರಾವರಿ ಯಾಗಲಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ನಾಲ್ಕು ಗ್ರಾಮಗಳ ಜಮೀನಿನ ಸಮಸ್ಯೆ ಇತ್ತು. ಅಣ್ಣೀಗೆರೆ, ವೈಮಲ್ಲಾ ಪುರ. ಕುರುಬರಹಳ್ಳಿ ಗ್ರಾಮದ ರೈತರು ಜಮೀನನ್ನು ನೇರ ಖರೀದಿಗೆ ಒಪ್ಪಿ ನೀಡಿದ್ದಾರೆ. ಎಕರೆಗೆ ₹30 ಲಕ್ಷ ರು. ಪರಿಹಾರ ಸಿಗಲಿದೆ. ಇನ್ನೂ ಒಂದು ಗ್ರಾಮದ ಸಮಸ್ಯೆ ಮುಗಿದರೆ ಕಾಮಗಾರಿ ಪ್ರಗತಿ ವೇಗಗೊಳಿಸಲು ಸಾಧ್ಯವಾಗಲಿದ್ದು ರೈತರು ಸಹಕರಿಸಬೇಕು ಎಂದರು.

ಯೋಜನೆ ವ್ಯಾಪ್ತಿಗೆ ಒಳಪಡುವ ಸ್ಥಳೀಯ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿ, ಗ್ರಾಮಸ್ಥರ ಸಹಕಾರ ರೇಷ್ಮೆ ಇಲಾಖೆ ಖಾಸಗಿಯವರ ಸಮಸ್ಯೆ ಪರಿಹರಿಸಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಭದ್ರಾ ನೀರು ನೀಡಲು ಸಹಕಾರಿಯಾಗಲಿದೆ. ಕೆಲವು ಗ್ರಾಮಗಳಲ್ಲಿ ಸಮಸ್ಯೆ ಪರಿಹರಿಸಲು ಪೊಲೀಸ್ ಇಲಾಖೆ ಸಹಕಾರ ಪಡೆಯ ಬೇಕು. ಕಾಮಗಾರಿ ಚುರುಕುಗೊಳಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಎಲ್ಲ ಎಂಜಿನಿಯರ್‌ ಹಾಗೂ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಬೇಕೆಂದರು. ಕಾಮಗಾರಿಗೆ ಚುರುಕು ನೀಡದೇ ಇದ್ದರೆ ಸಚಿವರ ಗಮನಕ್ಕೂ ತರಲಾಗುವುದು ಎಂದರು.

ಸಭೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಹರ್ಷ, ತ್ಯಾಗರಾಜ್, ಪ್ರವೀಣ್, ಮೋಹನ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಪ್ರಕಾಶ್, ಹರಿರಾಮ್, ಕೆಎಲ್‌ಎಸ್‌ ಆರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಸೋಮ ಸುಂದರ್, ಅರುಳ್ ಮುರುಗನ್, ಮನೋಹರ್, ಸುಧಾಕರ್, ರೇಣುಕಯ್ಯ, ದಿವಾಕರ್, ಎ.ಡಿ.ಎಚ್. ಜಯದೇವಪ್ಪ, ಆರ್‌ಎಫ್‌ಒ ಹರೀಶ್, ಸಿಪಿಐಗಳಾದ ರಫೀಕ್, ಹಾಲಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

16ಕೆಕೆಡಿಯು5.

ಕಡೂರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷಗಳ ಚನ್ನಗಿರಿ ಅಜ್ಞಾತವಾಸ ಅಂತ್ಯ ಸನ್ನಿಹಿತ
ಹಳ್ಳ ಮುಚ್ಚಿದ್ದ ಹೋರಾಟದಲ್ಲಿ ನನ್ನ ಗೆಲುವು: ಬಿ.ಪಿ.ಹರೀಶ