ಹುಬ್ಬಳ್ಳಿ: ಜಿಐಎಸ್‌ ಸರ್ವೇ ಪೂರ್ಣಗೊಳಿಸುವುದು, ಪೌರಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ, ಸಂಕಷ್ಟ ಭತ್ಯೆ, 320 ಗೃಹ ಭಾಗ್ಯ ಯೋಜನೆ ಪೂರ್ಣಗೊಳಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸುವುದು, ಇವು ನನ್ನ ಮೊದಲ ಆದ್ಯತೆ ಎಂದು ಮೇಯರ್‌ ದುರ್ಗಮ್ಮ ಬಿಜವಾಡ ಅವರು ಪಾಲಿಕೆಯ ತಮ್ಮ ಮೊದಲ ಸಾಮಾನ್ಯ ಸಭೆಯಲ್ಲಿ ಘೋಷಿಸಿದರು.

ಹಾಗಂತ ಇವು ಹೊಸ ಯೋಜನೆಗಳೇನೂ ಅಲ್ಲ. ಹಳೆಯ ಯೋಜನೆಗಳೇ. ಇವುಗಳನ್ನೇ ತ್ವರಿತಗತಿಯಲ್ಲಿ ಕೈಗೊಂಡು ತಮ್ಮ ಅಧಿಕಾರವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಆಸ್ತಿ ತೆರಿಗೆ ಹೆಚ್ಚಿಸಲು ಪಾಲಿಕೆಯಿಂದ ಜಿಐಎಸ್‌ ಸಮೀಕ್ಷೆ ನಡೆಸಲಾಗುತ್ತಿದೆ. ಇದು ಪೂರ್ಣಗೊಂಡರೆ ಪಾಲಿಕೆ ಆದಾಯ ದುಪ್ಪಟ್ಟು ಆಗುತ್ತದೆ. ಆದರೆ, ಕಳೆದ ಕೆಲ ದಿನಗಳಿಂದ ಇದು ನಿಧಾನಗತಿಯಲ್ಲಿ ಸಾಗುತ್ತಿದೆ. ಆದಕಾರಣ ಇದನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಪೌರಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ. ಸಂಕಷ್ಟ ಭತ್ಯೆ ಬರುತ್ತಿಲ್ಲ ಎಂಬ ದೂರುಗಳಿವೆ. ಇವುಗಳನ್ನು ನಿವಾರಿಸಲಾಗುವುದು. ಜತೆಗೆ ಪೌರಕಾರ್ಮಿಕರಿಗಾಗಿ 320 ಮನೆಗಳ ನಿರ್ಮಾಣದ ಗೃಹ ಭಾಗ್ಯ ಯೋಜನೆಗೆ ಚಾಲನೆ ನೀಡಲಾಗಿದೆ. ಅದನ್ನು ಇದೇ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಪಾಲಿಕೆಯ ಆಧೀನದಲ್ಲಿರುವ 2744 ಲೀಸ್‌ ಆಸ್ತಿಗಳನ್ನು ಹರಾಜು ಮಾಡಿ ಬರುವ ಆದಾಯದಲ್ಲಿ ಪಾಲಿಕೆಯಿಂದ ಬೃಹತ್‌ ಮಾರುಕಟ್ಟೆ ಪ್ರದೇಶ ಸ್ಥಾಪಿಸಲಾಗುವುದು ಎಂದರು. ಮಹಾನಗರದಲ್ಲಿರುವ ರಾಜನಾಲಾಗಳನ್ನು ಅಭಿವೃದ್ಧಿ ಪಡಿಸಿ ಹೂಳೆತ್ತಲಾಗುವುದು. ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

ಹಸಿರೇ ಉಸಿರು ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿನ 728 ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅಭಿವೃದ್ಧಿ, ವಲಯ ಕಚೇರಿಗಳನ್ನು ಜನಸ್ನೇಹಿಗಳನ್ನಾಗಿ ಮಾಡಲಾಗುವುದು ಎಂದರಲ್ಲದೇ, ಮಹಿಳೆಯರ ಸಬಲೀಕರಣಕ್ಕಾಗಿ ಬಜೆಟ್‌ನಲ್ಲಿ ಘೋಷಿಸಿರುವ ಪಿಂಕ್‌ ಆಟೋ ಸೇವೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.


ಸಭಾನಾಯಕ ಶಿವು ಮೆಣಸಿನಕಾಯಿ ಮಾತನಾಡಿ, ಮೇಯರ್‌ ಅವರು ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇದು ಒಳ್ಳೆಯದು. ಅವರೊಂದಿಗೆ ನಾವು ಕೈಜೋಡಿಸೋಣ. ಇನ್ನು ಮಹಿಳೆಯರ ಸಬಲೀಕರಣಕ್ಕೆ ಘೋಷಿಸಿರುವ ಪಿಂಕ್‌ ಆಟೋ ಶೀಘ್ರದಲ್ಲೇ ಚಾಲನೆ ನೀಡುವಂತೆ ಆಗಬೇಕು ಎಂದರು.

ವಿರೋಧ ಪಕ್ಷದ ನಾಯಕ ಇಲಿಯಾಸ್‌ ಮನಿಯಾರ ಮಾತನಾಡಿ, ಕಳೆದ ನಾಲ್ಕು ವರ್ಷದಿಂದಲೂ ಬರೀ ಘೋಷಣೆಯೇ ಆಗಿದೆ. ಕೆಲಸಗಳು ಮಾತ್ರ ಆಗಿಲ್ಲ. ಈ ವರ್ಷ ನಮ್ಮ ಕೊನೆಯ ಅವಧಿಯಾಗಿದೆ. ಬರೀ 10 ತಿಂಗಳು ಮಾತ್ರ ಉಳಿದಿದೆ. ಮುಂದೆ ಚುನಾವಣೆಗೆ ಹೋಗುತ್ತೇವೆ. ಈ ಸಲವಾದರೂ ಕೆಲಸ ಮಾಡಿ ತೋರಿಸಿ ಎಂದು ಆಗ್ರಹಿಸಿದರು.

ಆಡಳಿತದ ಪಕ್ಷದ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಪಾಲಿಕೆಯ ಗಡಿ ವ್ಯಾಪ್ತಿ ವಿಸ್ತರಿಸುತ್ತಲೇ ಇಲ್ಲ. ಹುಡಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಆದರೆ ಪಾಲಿಕೆ ಮಾತ್ರ ಹಳೆ ಗಡಿಯಲ್ಲೇ ಇದೆ. ಈ ಸಲವಾದರೂ ಆಯುಕ್ತರು ಇದಕ್ಕಾಗಿ ಪ್ರತ್ಯೇಕ ವಿಶೇಷ ತಂಡ ರಚಿಸಿ ಪಾಲಿಕೆಯ ಗಡಿ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದರು. ವಿರೋಧ ಪಕ್ಷದ ಸದಸ್ಯ ಇಮ್ರಾನ್‌ ಎಲಿಗಾರ್‌, ಪ್ರತಿಯೊಂದು ಕೆಲಸಕ್ಕೆ ಬರೀ ವಾರ್ಡ್‌ ಫಂಡ್‌ ಬಳಸುವಂತೆ ಆಯುಕ್ತರು ತಿಳಿಸುತ್ತಾರೆ. ನಾವು ಆರಿಸಿ ಬಂದು ನಾಲ್ಕು ವರ್ಷವಾದರೂ ಈ ವರೆಗೂ ಜನರಲ್‌ ಫಂಡ್‌ ರಿಲೀಸ್‌ ಮಾಡಿಯೇ ಇಲ್ಲ. ಇಷ್ಟು ದಿನ ನಾವು ಸುಮ್ಮನಿದ್ದೇವು. ಇದೀಗ ಕೊನೆಯ ವರ್ಷ. ಈ ಸಲವಾದರೂ ಜನರಲ್‌ ಫಂಡ್‌ ನೀಡಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಆಡಳಿತದ ಪಕ್ಷದ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಎಲ್‌ಆ್ಯಂಡ್‌ಟಿ ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಳ್ಳುವ ಮೂಲಕ ನಮ್ಮ ಅಧಿಕಾರವಧಿಯಲ್ಲೇ 82 ವಾರ್ಡ್‌ಗಳಿಗೆ 24/7 ನೀರು ಸರಬರಾಜು ಮಾಡುವಂತಾಗಬೇಕು. ಫ್ಲೈಓವರ್‌ ಕಾಮಗಾರಿಯಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದರು.