
ಕನ್ನಡಪ್ರಭ ವಾರ್ತೆ, ತುಮಕೂರುಜಾತಿ ಪ್ರಮಾಣ ಪತ್ರ ಇಲ್ಲದೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದಕಾರಣ ಜಾತಿ ಪತ್ರಗಳನ್ನು ತ್ವರಿತವಾಗಿ ವಿತರಣೆ ಮಾಡುವಂತೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ದಿ ನಿಗಮದ ಅಧ್ಯಕ್ಷ ಮಹೇಶ್ ಹಾರೋಗೆರೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾಡುಗೊಲ್ಲ ಸಮುದಾಯ ಅತ್ಯಂತ ಹಿಂದುಳಿದ ಒಂದು ಬುಡಕಟ್ಟು ಸಮುದಾಯವಾಗಿದ್ದು ಈ ಜನರಿಗೆ ಸರ್ಕಾರದ ಸವಲತ್ತುಗಳು ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ. ಅವರಿಗೆ ಅಷ್ಟು ಜಾನವಿಲ್ಲ. ಸರ್ಕಾರ ಇದನ್ನು ಅರಿತು ಕಾಡುಗೊಲ್ಲ ಸಮುದಾಯಕ್ಕೆಂದೇ ಪ್ರತ್ಯೇಕ ನಿಗಮ ಮಾಡಿದೆ. ಈ ನಿಗಮದ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಆದರೆ ಈ ಜನಕ್ಕೆ ಅಭಿವೃದ್ದಿ ನಿಗಮದಿಂದ ಸಿಗುವ ಯೋಜನೆಗಳನ್ನು ತಲುಪಿಸಲು ಜಾತಿ ಪ್ರಮಾಣ ಪತ್ರ ಮುಖ್ಯವಾಗಿದ್ದು ಇದು ಇಲ್ಲದೆ ಎಷ್ಟೋ ಜನ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ತಾಲೂಕು ಮಟ್ಟದ ಕಂದಾಯ ಅಧಿಕಾರಿಗಳು, ತಹಸೀಲ್ದಾರ್ ಅವರುಗಳು ಗಮನಹರಿಸಿ ಶಿಘ್ರ ಜಾತಿ ಪತ್ರ ವಿತರಣೆ ಮಾಡುವಂತೆ ತಿಳಿಸಿದರು.
ರಾಜ್ಯದ ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಈ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ಹಾಗೂ ಜಾತಿ ಪ್ರಮಾಣ ಪತ್ರ ಬೇಗನೇ ಸಿಗುತ್ತಿಲ್ಲವಾದ ಕಾರಣ ವಿವಿಧ ಯೋಜನೆಗಳಿಗೆ ಅರ್ಜಿ ಹಾಕುತ್ತಿಲ್ಲ. ಅಧಿಕಾರಿಗಳು ಇದನ್ನು ಗಮನಿಸಬೇಕು. ಸರ್ಕಾರವೂ ಸಹ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಇದಕ್ಕೆ ತಹಸಿಲ್ದಾರ್ ರವರು ಹೆಚ್ಚು ಒತ್ತು ನೀಡಬೇಕು ಎಂದರು. ಗಂಗಾಕಲ್ಯಾಣ, ನೇರ ಸಾಲ ಯೋಜನೆ, ಸಾರಥಿ ಯೋಜನೆ ಅಡಿಯಲ್ಲಿ ವಾಹನ ಸೌಲಭ್ಯ, ಅರಿವು ಶೈಕ್ಷಣಿಕ ಯೋಜನೆ, ವಿದೇಶಿ ವ್ಯಾಸಂಗಕ್ಕೆ ಸಾಲ ಹೊಲಿಗೆ ಯಂತ್ರ ಹೀಗೆ ಹಲವು ರೀತಿಯ ಸಾಲ ಯೋಜನೆಗಳಿದ್ದು ಕಾಡುಗೊಲ್ಲ ಜನಾಂಗದವರು ಇದರ ಅದುಪಯೋಗಪಡಿಸಿಕೊಳ್ಳಬೇಕು ಎಂದರು.ತುಮಕೂರು ಜಿಲ್ಲೆಯ ಸಮಾಜದ ಜನರಿಗೆ ಈ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದಾಕ್ಷಣ ಬೇಗನೇ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಹಸಿಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಸಭೆ ಕರೆದು ಅವರಿಗೆ ಮಾಹಿತಿ ನೀಡಲು ಸಹಕರಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತ್ವರಿತವಾಗಿ ಜಾತಿ ಪತ್ರ ವಿತರಿಸಲು ಕ್ರಮ ವಹಿಸಬೇಕು ಎಂದರು.