ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ
ತಾಲೂಕಿನ ಎಷ್ಟು ಶಾಲೆಗಳು ಅರಣ್ಯ ಇಲಾಖೆ ಸೇರಿದ ಜಾಗದಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ತಾಪಂ ಆಡಳಿತಾಧಿಕಾರಿ ಕೊಪ್ಪ ಡಿಎಫ್ಒ ಶಿವಶಂಕರ್ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಅವರಿಗೆ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದಾದರೂ ಶಾಲೆಗಳು ಅರಣ್ಯ ಇಲಾಖೆ ಜಾಗದಲ್ಲಿದ್ದು ಆ ಶಾಲೆಯಲ್ಲಿ ಓದುತ್ತಿರುವ ಅದೇ ಗ್ರಾಮದ ಯಾವುದಾದರೊಂದು ಮಗುವಿನ ಕುಟುಂಬಕ್ಕೆ ಅರಣ್ಯ ಹಕ್ಕು ಸಮಿತಿಯಿಂದ ಹಕ್ಕು ಪತ್ರ ವಿತರಣೆಯಾಗಿದ್ದರೆ ಕಾಲಂ 11 ರ ಆಧಾರದ ಮೇಲೆ ಆ ಶಾಲೆ ಜಾಗಕ್ಕೆ ಪಹಣಿ ಮಾಡಿಸಿಕೊಳ್ಳುವ ಅವಕಾಶವಿದೆ. ಆದ್ದರಿಂದ ಅರಣ್ಯ ಇಲಾಖೆ ಜಾಗದಲ್ಲಿರುವ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗುವಿನ ಕುಟುಂಬಕ್ಕೆ ಅರಣ್ಯ ಹಕ್ಕು ಸಮಿತಿಯಿಂದ ಹಕ್ಕುಪತ್ರ ವಿತರಣೆಯಾಗಿದೆಯೇ ? ಎಂದು ಮೊದಲು ಮಾಹಿತಿ ಕಲೆ ಹಾಕಬೇಕು ಎಂದು ಬಿಇಒ ಶಬಾನಾ ಅಂಜುಮ್ ಅವರಿಗೆ ತಿಳಿಸಿದರು.ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ ಸಭೆಗೆ ಮಾಹಿತಿ ನೀಡಿ, ಎನ್.ಆರ್.ಪುರ ತಾಲೂಕಿನಲ್ಲಿ ಮಂಗನ ಖಾಯಿಲೆ 52 ಪಾಸಿಟಿವ್ ಬಂದಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಯಾವುದೇ ಆತಂಕ ಇಲ್ಲ. 14 ವರ್ಷ ಮೇಲ್ಪಟ್ಟ ಹಾಗೂ 15 ವರ್ಷದೊಳಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಎಚ್.ಪಿ.ವಿ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ. ವ್ಯಾಕ್ಸಿನೇಷನ್ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಹಾಗೂ ಅಡ್ಡ ಪರಿಣಾಮ ಗಳಾಗುತ್ತದೆ ಎಂಬ ಸುಳ್ಳು ವದಂತಿಗಳಿಂದ ವ್ಯಾಕ್ಸಿನೇಷನ್ ಪ್ರಗತಿ ಕಡಿಮೆಯಾಗಿದೆ. ಆರೋಗ್ಯ ಇಲಾಖೆ ಯಿಂದ ಸಾಕಷ್ಟು ಪ್ರಚಾರ ಹಾಗೂ ವ್ಯಾಕ್ಸಿನೇಷನ್ ತೆಗೆದುಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ತಾಪಂ ಟಿಪಿಒ ಯಾದವರಾಜ್, ಪ್ರಭಾರ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಮಂಜುಳ, ತಾಲ್ಲೂಲೂಕು ಮಟ್ಟದ ಇಲಾಖಾಧಿಕಾರಿಗಳು ಹಾಗೂ ಗ್ರಾಪಂಗಳ ಪಿಡಿಒ ಉಪಸ್ಥಿತರಿದ್ದರು.