ಹುಬ್ಬಳ್ಳಿ: ಜನಿವಾರಕ್ಕೆ ಕೈ ಹಾಕುವ ಮೂಲಕ ಬ್ರಾಹ್ಮಣ್ಯಕ್ಕೆ ಅಪಮಾನ ಮಾಡಲಾಗಿದೆ. ನಾವು ರಾಮನ ಆರಾಧಕರು, ತಿರುಗಿಬಿದ್ದರೆ ಪರಶುರಾಮ ಆಗಬೇಕಾಗುತ್ತದೆ. ಜನಿವಾರ ತೆಗೆಸುವುದರ ಹಿಂದೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದ್ದಾರೆ ಎಂದು ಬ್ರಾಹ್ಮಣ ಸೇವಾ ಸಂಘದ ಧಾರವಾಡ ಜಿಲ್ಲಾ ಉಪಾಧ್ಯಕ್ಷ ಶಂಕರ ಪಾಟೀಲ ಗಂಭೀರವಾಗಿ ಆರೋಪಿಸಿದರು.
ಬ್ರಾಹ್ಮಣ ಸೇವಾ ಸಂಘದ ಧಾರವಾಡ ಜಿಲ್ಲಾ ಘಟಕದಿಂದ ಇಲ್ಲಿಯ ರೈಲ್ವೆ ನಿಲ್ದಾಣದ ಈಶ್ವರ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ಕರೆದಿದ್ದ ಖಂಡನಾ ನಿರ್ಣಯ ಸಭೆಯಲ್ಲಿ ಅವರು ಮಾತನಾಡಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿ ಏ. 21ರಂದು ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಈಶ್ವರ ದೇವಸ್ಥಾನದ ಟ್ರಸ್ಟಿ ವಸಂತ ನಾಡಜೋಶಿ ಮಾತನಾಡಿ, ಸರ್ಕಾರ ಅವೈಜ್ಞಾನಿಕವಾಗಿ ಜಾತಿ ಗಣತಿ ವರದಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕೇವಲ ಶೇ. 2ರಷ್ಟು ಬ್ರಾಹ್ಮಣ ಸಮಾಜ ಇದೆ ಎಂಬ ತಪ್ಪು ಸಂದೇಶ ರವಾನಿಸಲಾಗುತ್ತಿದೆ. ೩೮ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದೆ. ನಮ್ಮ ಸಮಾಜದವರು ಮುಂದೆ ಬರಬಾರದು ಎಂದು ಈ ರೀತಿ ಮಾಡಲಾಗುತ್ತಿದೆ ಎಂದರು.ವಿದ್ಯಾರ್ಥಿಯ ಜನಿವಾರ ತೆಗೆಸುವ ಮೂಲಕ ರಾಜ್ಯ ಸರ್ಕಾರವು ಬ್ರಾಹ್ಮಣ ಸಮಾಜದ ಮೇಲೆ ಪ್ರಹಾರ ಮಾಡಿದೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ, ಹೋರಾಟ ಅನಿವಾರ್ಯ ಎಂದರು.
ಯಾಜ್ಞವಲ್ಕ್ಯಸೇವಾ ಟ್ರಸ್ಟ್ ಅಧ್ಯಕ್ಷ ಸತ್ಯನಾರಾಯಣ ಮಾರಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಿತ್ತುಕೊಳ್ಳಲಾಗಿದೆ. ಜನಿವಾರ ತೆಗೆಸಿದ ಅಧಿಕಾರಿಯನ್ನು ವಜಾಗೊಳಿಸಬೇಕು. ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಬೇಕು. ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವುದು ಸೇರಿ ಇನ್ನಿತರ ಹೋರಾಟದ ಹಾದಿ ತುಳಿಯಬೇಕಿದೆ ಎಂದರು.ಬ್ರಾಹ್ಮಣ ಸೇವಾ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಓಕ್, ಪ್ರಮುಖರಾದ ಡಿ.ಪಿ. ಪಾಟೀಲ, ಬಿ.ಜೆ. ಕುಲಕರ್ಣಿ, ವೀಣಾ ನಾಗರಹಳ್ಳಿ, ಸುಧೀರ ಇಂಗಳಗಿ, ನಾರಾಯಣ ನಿಡಗುಂದಿ, ಪ್ರಭಾಕರ ಮನಗೋಳಿ, ಎಸ್.ಕೆ. ಕುಲಕರ್ಣಿ ಇತರರು ಭಾಗವಹಿಸಿದ್ದರು.