ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನ ವೀರ ಸೇನಾನಿಗಳನ್ನು ಅಪಮಾನ ಮಾಡಿದ ಆರೋಪಿಯನ್ನು ಕೊಡಗಿನಿಂದ 6 ತಿಂಗಳ ಕಾಲ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಸರ್ವಜನಾಂಗದ ಒಕ್ಕೂಟ ಗುರುವಾರ ಕೊಡಗು ಬಂದ್‌ಗೆ ಕರೆ ನೀಡಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ರಾಜೀವ್ ಬೋಪಯ್ಯ, ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಅನುಚಿತ ಸಂದೇಶ ರವಾನೆ ಮಾಡಿರುವ ಆರೋಪಿ ಒಂದು ಜನಾಂಗವನ್ನು ತುಳಿದು ಮತ್ತೊಂದು ಜನಾಂಗವನ್ನು ಎತ್ತಿ ಕಟ್ಟುವ ಮೂಲಕ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಹೊರಗಿನವರು ಬಂದು ನಮ್ಮನ್ನಾಳುವ ಸ್ಥಿತಿ ಎಂದಿಗೂ ಬರಲು ಬಿಡಬಾರದು. ಅಂತಹವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಬಂದ್‌ಗೆ ನಿರ್ಧರಿಸಲಾಗಿದೆ ಎಂದರು.ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಶಾಂತಿಯುತ ಬಂದ್ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲು ಸಿದ್ಧರಿದ್ದೇವೆ. ರಾಜಕೀಯ ನಿಲುವು ತಳೆಯಬಾರದೆಂಬ ಉದ್ದೇಶದಿಂದ ಬಂದ್‌ಗೆ ರಾಜಕೀಯ ಪಕ್ಷದವರ ಬೆಂಬಲವನ್ನು ನಿರೀಕ್ಷಿಸಿಲ್ಲ ಎಂದರು.
ಕೊಡಗಿನಲ್ಲಿ ಜಾತಿ ಮತ್ತು ಮತಗಳ ನಡುವಿನ ವೈಮನಸ್ಸು ದೂರವಾಗಬೇಕು, ಕೋಮು ಸೌಹಾರ್ದತೆ ಸ್ಥಾಪನೆಯಾಗಬೇಕೆಂಬ ನಿಟ್ಟಿನಲ್ಲಿ ಕೊಡಗು ಸರ್ವ ಜನಾಂಗದ ಒಕ್ಕೂಟ ಎಂಬ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಜನಾಂಗ ಅಥವಾ ಧರ್ಮದ ವಿರುದ್ಧ ಹೇಳಿಕೆ ನೀಡುವುದಾಗಲಿ, ನಿಂದಿಸುವುದಾಗಲಿ ಕಂಡುಬಂದಲ್ಲಿ ಅವುಗಳ ವಿರುದ್ಧ ಒಕ್ಕೂಟ ಕಾರ್ಯನಿರ್ವಹಿಸಲಿದೆ ಎಂದರು.ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಎಲ್ಲಾ ಜಾತಿ, ಜನಾಂಗದವರು ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಒಕ್ಕೂಟ ರಚಿಸಿದ್ದು, ಸಂಘಟನೆಯ ಮೊದಲನೆ ಕಾರ್ಯಕ್ರಮವಾಗಿ ಕೊಡಗು ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅಂದು ಎಲ್ಲಾ ವ್ಯಾಪಾರ ವಹಿವಾಟು ಬಂದ್ ಆಗಲಿದೆ ಎಂದರು.
ಹೊಟೇಲ್ ಅಸೋಸಿಯೇಷನ್ ಉಪಾಧ್ಯಕ್ಷ ಜಹೀರ್, ಆಟೋ ಮಾಲೀಕ ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಮೇದಪ್ಪ, ಒಕ್ಕೂಟದ ಸದಸ್ಯ ಪ್ರಭು ಪೂಣಚ್ಚ ಮಾತನಾಡಿ, ಬಂದ್‌ಗೆ ನಮ್ಮ ಬೆಂಬಲವೂ ಇದ್ದು, ಸರ್ವರೂ ಇದಕ್ಕೆ ಕೈ ಜೋಡಿಸಬೇಕೆಂದು ಆಗ್ರಹಿಸಿದರು.