ಬಳ್ಳಾರಿ: ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ ಮತದಾನ ವೇಳೆ ವಾಲ್ಮೀಕಿ ನಾಯಕರ ಜಾತಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ ಬೆಳಗಾವಿ ಜಿಲ್ಲೆ ಬೆಲ್ಲದ ಬಾಗೇವಾಡಿಯ ರಮೇಶ್ ಕತ್ತಿ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ದೂರು ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ಸಮಾಜದ ಮುಖಂಡರು ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ನಾಗರಿಕ ಹಕ್ಕು ನಿರ್ದೇಶನಾಲಯಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಅ.19ರಂದು ಬೆಳಗಾವಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಮೈದಾನ ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣಾ ಮತದಾನ ಪ್ರಕ್ರಿಯೆ ನಡೆಯುತ್ತಿರುವ ವೇಳೆ ರಮೇಶ್ ಕತ್ತಿ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರು, ವಾಲ್ಮೀಕಿ ಸಮುದಾಯದ ಕುರಿತು ಅವಾಚ್ಯ ಶಬ್ದಗಳಿಂದ ಬೇಡರ ಜಾತಿಯನ್ನು ನಿಂದನೆ ಮಾಡಿ ಅವಮಾನಿಸಿದ್ದಾರೆ. ಇದರಿಂದ ರಾಜ್ಯಾದ್ಯಂತ 75 ಲಕ್ಷ ವಾಲ್ಮೀಕಿ ನಾಯಕ ಸಮುದಾಯದ ಮನಸ್ಸಿಗೆ ತೀವ್ರವಾಗಿ ಘಾಸಿಯಾಗಿದೆ. ರಮೇಶ್ ಕತ್ತಿ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದರಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಡುವ ಸಂಭವವಿದೆ ಎಂದು ತಿಳಿಸಿದರು.ಈ ಹಿಂದಿನಿಂದಲೂ ರಮೇಶ್ ಕತ್ತಿ ಎಂಬಾತ ವಾಲ್ಮೀಕಿ ನಾಯಕ ಸಮುದಾಯವನ್ನು ಅವಮಾನಿಸುತ್ತಾ ಬಂದಿದ್ದಾನೆ. ಈತನ ಹೇಳಿಕೆಯಿಂದ ಇಡೀ ಸಮುದಾಯ ಘಾಸಿಗೊಂಡಿದೆ. ತಳ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವ ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.
ಸಮುದಾಯದ ಜಿಲ್ಲಾ ಪ್ರಮುಖರಾದ ಪಿ.ಜಗನ್ನಾಥ್, ವಿ.ಕೆ. ಬಸಪ್ಪ, ಸಂಗನಕಲ್ಲು ವಿಜಯಕುಮಾರ್, ಲೋಕೇಶ್, ಕಲಾವತಿ, ಬಸರಗೋಡು ಗೋವಿಂದ, ಗಂಗಾಧರ, ಕರ್ಚೆಡು ಬಸವರಾಜ, ದಮ್ಮೂರು ಹೊನ್ನೂರಪ್ಪ, ಕಪ್ಪಗಲ್ಲು ಓಂಕಾರಪ್ಪ, ಅರುಣ್ ಕುಮಾರ್, ಅಸುಂಡಿ ಹನುಮೇಶ, ವಣೀನೂರು ಶ್ರೀನಿವಾಸ, ಕಗ್ಗಲ್ ದೇವೇಂದ್ರಪ್ಪ, ಸಿಂಧುವಾಳ ಧರ್ಮಣ್ಣ, ಪಾಲಾಕ್ಷಿ, ಶ್ರೀಕಾಂತ್, ಚೇಳುಗುರ್ಕಿ ತಿಪ್ಪೇರುದ್ರ,ಮೀನಹಳ್ಳಿ ಶ್ರೀರಾಮುಲು, ರಾಮಕೃಷ್ಣ ಚಾಗನೂರು ಮತ್ತಿತರರಿದ್ದರು.ವಾಲ್ಮೀಕಿ ನಾಯಕರ ಜಾತಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ ಬೆಳಗಾವಿ ಜಿಲ್ಲೆ ಬೆಲ್ಲದ ಬಾಗೇವಾಡಿಯ ರಮೇಶ್ ಕತ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ಸಮಾಜದ ಮುಖಂಡರು ನಾಗರಿಕ ಹಕ್ಕು ನಿರ್ದೇಶನಾಲಯಕ್ಕೆ ಸೋಮವಾರ ಮನವಿ ಸಲ್ಲಿಸಿದರು.