ಸೇನಾನಿಗಳ ಅವಹೇಳನ: ಮಾಜಿ ಸೈನಿಕರ ಪ್ರತಿಭಟನೆ

KannadaprabhaNewsNetwork | Published : Dec 7, 2024 12:31 AM

ಸಾರಾಂಶ

ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಘಟಕ ಮಡಿಕೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಘಟಕ ಮಡಿಕೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಮಾಜಿ ಸೈನಿಕರು, ಕೊಡವ ಸಮಾಜಗಳ ಪ್ರತಿನಿಧಿಗಳು ಫೀ.ಮಾ.ಕಾರ್ಯಪ್ಪ ವೃತ್ತದಲ್ಲಿ ಸೇರಿ, ವೀರ ಸೇನಾನಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರತಿಭಟನೆ ಆರಂಭಿಸಿದರು.

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕರ ಸೋಮಣ್ಣ ಮಾತನಾಡಿ, ರಾಷ್ಟ್ರದ ಪ್ರಥಮ ಮಹಾ ದಂಡ ನಾಯಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಸೈನಿಕರ ಸೇನಾನಿ ಎಂದೇ ಖ್ಯಾತರಾದ ಜ.ತಿಮ್ಮಯ್ಯ ಭಾರತದ ಹೆಮ್ಮೆಯ ಶ್ರೇಷ್ಠ ಪುತ್ರರು. ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದು ಭಾರತೀಯರಿಗೆಲ್ಲರಿಗೂ ಮಾಡಿರುವ ಅವಹೇಳನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ.ಮಂದಣ್ಣ ಮಾತನಾಡಿ, ವೀರ ಸೇನಾನಿಗಳಾದ ಫೀ.ಮಾ.ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವುದು ಕೇವಲ ಜಿಲ್ಲೆಯ ಮಾಜಿ ಸೈನಿಕರಿಗೆ ಮಾತ್ರ ನೋವನ್ನುಂಟು ಮಾಡಿಲ್ಲ. ಬದಲಾಗಿ ದೇಶದ ಇಡೀ ಸೈನಿಕ ಸಮೂಹಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಜಿಲ್ಲೆಯ ವೀರ ಸೇನಾನಿಗಳಾದ ಫೀ.ಮಾ.ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವುದು ಸೈನಿಕರ ನಾಡು ಕೊಡಗಿನ ಪ್ರತಿಯೊಬ್ಬರ ರಕ್ತ ಕುದಿಯುವಂತೆ ಮಾಡಿದೆ. ಶಾಂತಿ ಸೌಹಾರ್ದತೆಯ ಕೊಡಗಿನಲ್ಲಿ ಅಶಾಂತಿ ಹುಟ್ಟು ಹಾಕುವ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಪ್ರಕರಣದ ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ವೀರಸೇನಾನಿಗಳನ್ನು ತನ್ನ ಅವಹೇಳನಕಾರಿ ಸಂದೇಶದ ಮೂಲಕ ತೇಜೋವಧೆ ಮಾಡಲು ಮುಂದಾದ ವ್ಯಕ್ತಿಯನ್ನು ಸಂಘ ಶಾಶ್ವತವಾಗಿ ಮಡಿಕೇರಿ ವಕೀಲರ ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳಬೇಕು ಹಾಗೂ ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕ್ರಮ

ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಕೊಡಗು

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ, ಚೇರಂಬಾಣೆಯ ಮಾಜಿ ಸೈನಿಕರ ಸಂಘ, ಸುಂಟಿಕೊಪ್ಪದ ಜೈಜವಾನ್ ಮಾಜಿ ಸೈನಿಕರ ಟ್ರಸ್ಟ್, ಕುಶಾಲನಗರ, ಫೀ.ಮಾ.ಕಾರ್ಯಪ್ಪ ಮತ್ತು

ಜ.ತಿಮ್ಮಯ್ಯ ಫೋರಂ, ಚೇರಂಬಾಣೆ, ಪೊನ್ನಂಪೇಟೆ, ಮೂರ್ನಾಡು, ಸೋಮವಾರಪೇಟೆ, ಮಡಿಕೇರಿ ಸೇರಿದಂತೆ ವಿವಿಧೆಡೆಗಳ ಕೊಡವ ಸಮಾಜಗಳು, ಸಿಎನ್‌ಸಿ, ಕೊಡವ

ಮಕ್ಕಡ ಕೂಟ, ಹಿಂದು ಹಿತರಕ್ಷಣಾ ಸಮಿತಿ ಸಂಘಟನೆಗಳು ಪಾಲ್ಗೊಂಡಿದ್ದವು.

ಕರ್ನಾಟಕ ಮಾಜಿ ಸೈನಿಕ ಸಂಘದ ಅಧ್ಯಕ್ಷ ಡಾ.ಶಿವಣ್ಣ, ಕರ್ನಾಟಕ ಮಾಜಿ ಸೈನಿಕ ಸಂಘದ ಕೊಡಗು ಘಟಕದ ಕಾರ್ಯದರ್ಶಿ ಸಿ.ಜಿ.ತಿಮ್ಮಯ್ಯ, ಸಹ ಕಾರ್ಯದರ್ಶಿ ಎಂ.ಕೆ.ನಾಚಪ್ಪ, ಸಂಚಾಲಕರಾದ ನಾಟೋಳಂಡ ಸೋಮಯ್ಯ, ಫೀ.ಮಾ. ಕಾರ್ಯಪ್ಪ, ಜ.ತಿಮ್ಮಯ್ಯ ಫೋರಂ

ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Share this article