ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ೨೦೨೩-೨೪ನೇ ಸಾಲಿನ ಬತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿಯ ವಿಮೆಯ ಸುಮಾರು ₹೪೧ ಕೋಟಿ ಜಮಾ ಆಗಿದೆ. ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ಶೀಘ್ರವಾಗಿ ವರ್ಗಾಯಿಸಲಾಗುತ್ತದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಯಲ್ಲಾಪುರ: ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ೨೦೨೩-೨೪ನೇ ಸಾಲಿನ ಬತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿಯ ವಿಮೆಯ ಸುಮಾರು ₹೪೧ ಕೋಟಿ ಜಮಾ ಆಗಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಬತ್ತ, ಗೋವಿನ ಜೋಳ ಬೆಳೆಗೆ ಹಾನಿಯಾಗಿ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈ ಬೆಳೆ ವಿಮೆಯ ಬಿಡುಗಡೆಯಿಂದಾಗಿ ಬತ್ತ, ಗೋವಿನ ಜೋಳ ಬೆಳೆದ ಅನೇಕ ರೈತರ ಸಂಕಷ್ಟದ ಸಂದರ್ಭದಲ್ಲಿ ಬಲ ದೊರೆತಂತಾಗಿದೆ. ವಿಶೇಷವಾಗಿ ಈ ಸಾಲಿನಲ್ಲಿ ಬಿಡುಗಡೆಯಾದ ಬೆಳೆ ಹಾನಿ ವಿಮೆಯಲ್ಲಿ ತನ್ನ ಮತ ಕ್ಷೇತ್ರದ ಯಲ್ಲಾಪುರ ತಾಲೂಕಿಗೆ ₹೮೪,೮೫,೬೧೦; ಮುಂಡಗೋಡ ತಾಲೂಕಿಗೆ ₹೧೮,೪೧,೫೩,೧೮೬ ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ₹೧೫,೯೦,೫೯,೭೫೩ ಸೇರಿದಂತೆ ಒಟ್ಟು ₹೩೫ ಕೋಟಿ ರೈತರಿಗೆ ಲಭಿಸಿರುವುದು ಅತ್ಯಂತ ಸಂತಸದ ಸಂಗತಿ. ನನ್ನ ಕ್ಷೇತ್ರಕ್ಕೆ ಹೆಚ್ಚಿನ ವಿಮೆ ಪರಿಹಾರ ನೀಡಲು ಸಹಕರಿಸಿದ ಸರ್ಕಾರಕ್ಕೆ, ಕೃಷಿ ಇಲಾಖೆಯ ಅಧಿಕಾರಿಗಳಿಗೆ, ವಿಮಾ ಕಂಪನಿಯ ಸಿಬ್ಬಂದಿಗೆ ಕ್ಷೇತ್ರದ ರೈತರ ಪರವಾಗಿ ಅಭಿನಂದನೆ ತಿಳಿಸಿದ್ದಾರೆ.
ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿ ಈ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಅಧಿಕ ಪರಿಹಾರ ಒದಗಿಲಾಗಿದ್ದು, ವಿಮಾ ಕಂಪನಿಯ ಮಾನದಂಡಕ್ಕೆ ಅನುಗುಣವಾಗಿ ಜಿಲ್ಲೆಯ ಬತ್ತ ಹಾಗೂ ಗೋವಿನ ಜೋಳವನ್ನು ಬೆಳೆದ ರೈತರಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಮೂಲಕವಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ಶೀಘ್ರವಾಗಿ ವರ್ಗಾಯಿಸಲಾಗುತ್ತದೆ ಎಂದು ಹೆಬ್ಬಾರ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.