ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನಲ್ಲಿ ವಿವಿಧ ಕಾರಣಗಳಿಗೆ ಮೃತಪಟ್ಟಿದ್ದ ರಾಸುಗಳ ಮಾಲೀಕರಿಗೆ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ವಿಮಾ ಹಣದ ಚೆಕ್ ನ್ನು ತಾಲೂಕಿನ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ವಿತರಿಸಿದರು. ಪಟ್ಟಣದ ಆರ್ ಎಂ ಸಿ ಆವರಣದಲ್ಲಿರುವ ನಂದಿನಿ ಭವನದ ಆವರಣದಲ್ಲಿ ಮೃತಪಟ್ಟ ರಾಸುಗಳ 25 ಮಾಲೀಕರಿಗೆ ಸುಮಾರು 11.80 ಲಕ್ಷದ ಚೆಕ್ ನ್ನು ಮಾಲೀಕರಿಗೆ ವಿತರಣೆ ಮಾಡಲಾಯಿತು. ತಾಲೂಕಿನಲ್ಲಿ 25 ರಾಸುಗಳು ಮೃತಪಟ್ಟಿದ್ದವು. ಪ್ರತಿ ರಾಸುವಿಗೆ ಕನಿಷ್ಠ 40 ಸಾವಿರದಿಂದ 60 ಸಾವಿರ ರುಗಳವರೆಗೆ ವಿಮೆಯ ಪರಿಹಾರ ಹಣ ದೊರೆತಿದೆ ಎಂದು ಸಂಘದ ನಿರ್ದೇಶಕರಾದ ಸಿ.ವಿ.ಮಹಲಿಂಗಯ್ಯ ಹೇಳಿದರು. ಮುಂಬರುವ ದಿನಗಳಲ್ಲಿ ಈ ಪರಿಹಾರದ ಮೊತ್ತವನ್ನು ಗರಿಷ್ಠ 70 ಸಾವಿರದ ವರೆಗೂ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಈಗ ಸುಮಾರು 2 ಲಕ್ಷ ರಾಸುಗಳಿಗೆ ಉಚಿತವಾಗಿ ವಿಮೆ ಮಾಡಿಸಲಾಗಿದೆ. ಅದಕ್ಕಾಗಿ ಸುಮಾರು 22 ಕೋಟಿ ರು ವಿನಿಯೋಗಿಸಲಾಗಿದೆ ಎಂದು ಸಿ.ವಿ.ಮಹಲಿಂಗಯ್ಯ ತಿಳಿಸಿದರು. ಜಿಲ್ಲೆಯಲ್ಲಿ ಸುಮಾಋು 1347 ಸಂಘಗಳು ಇದ್ದು ಅವುಗಳಿಂದ ಪ್ರತಿದಿನಾ 8.90 ಲಕ್ಷ ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಹಾಲು ಉತ್ಪಾದಕರು ಸರಬರಾಜು ಮಾಡುವ ಹಾಲಿನ ಗುಣಮಟ್ಟದ ಮೇಲೆ ಹಾಲಿನ ದರ ನಿಗದಿ ಆಗಲಿದೆ. ಕನಿಷ್ಠ 33.75 ಪೈಸೆಯಿಂದ 55 ರುಗಳ ತನಕವೂ ರೈತರಿಗೆ ಹಣ ದೊರೆಯಲಿದೆ. ತಾಲೂಕಿನಲ್ಲಿ ಸುಮಾರು 129 ಸಂಘಗಳು ಇವೆ. ಇವುಗಳಿಂದ ಪ್ರತಿ ದಿನ 82 ಸಾವಿರ ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಸಂಘದ ಎಲ್ಲಾ ಸದಸ್ಯರಿಗೆ ಪ್ರತಿ ತಿಂಗಳು ತಪ್ಪದೇ ಹಣ ಸಂದಾಯವಾಗುತ್ತಿದೆ. 120 ಕೋಟಿ ರುಗಳನ್ನು ಆಪತ್ತಿನ ಧನವಾಗಿ ಡಿಸಿಸಿ ಬ್ಯಾಂಕ್ ನಲ್ಲಿ ಠೇವಣಿಯಾಗಿ ಇರಿಸಲಾಗಿದೆ ಎಂದು ಮಹಲಿಂಗಯ್ಯ ತಿಳಿಸಿದರು. ತುಮಕೂರಿನಲ್ಲಿ ಹಾಲು ಉತ್ಪಾದಕರ ಮಕ್ಕಳ ವಿದ್ಯಾರ್ಜನೆಗೆ ಅನುಕೂಲವಾಗಲೆಂದು ವಿದ್ಯಾರ್ಥಿ ನಿಲಯ ಪ್ರಾರಂಭಿಸಲಾಗಿದೆ. ಅಲ್ಲಿ ಸುಮಾರು 224 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು. ವ್ಯವಸ್ಥಾಪಕರಾದ ಚಂದ್ರಶೇಖರ್ ಕೇದನೂರಿ ಮಾತನಾಡಿ ಹೈನುಗಾರಿಕೆ ರೈತಾಪಿಗಳಿಗೆ ವರದಾನವಾಗಿದೆ. ಜಿಲ್ಲಾ ಹಾಲು ಒಕ್ಕೂಟದಿಂದ ರೈತರ ನೆರವಿಗೆ ಬರುವ ಸಲುವಾಗಿ ಪ್ರತಿಯೊಂದು ರಾಸುವಿಗೂ ತಮ್ಮ ಒಕ್ಕೂಟದಿಂದಲೇ ಉಚಿತವಾಗಿ ವಿಮೆ ಮಾಡಿಸಿಕೊಡಲಾಗುತ್ತಿದೆ. ರಾಸು ಕಳೆದುಕೊಂಡ ರೈತಾಪಿಗಳು ಈ ವಿಮೆ ಹಣದಿಂದ ಮತ್ತೊಂದು ರಾಸು ತಂದು ಪುನಃ ಹೈನುಗಾರಿಕೆಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು. ಈ ಸಂಧರ್ಭದಲ್ಲಿ ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್, ವೈದ್ಯರಾದ ಲೋಹಿತ್, ತೊರೆಮಾವಿನಹಳ್ಳಿ ಸಂಘದ ಅಧ್ಯಕ್ಷ ಟಿ.ಕೆ.ನಿಜಗುಣ, ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.