ಕಾರವಾರ ನಗರಸಭೆಯಲ್ಲಿ ಮಳೆನೀರು ಹೂಳು ತೆಗೆಯುವಿಕೆ ಬಗ್ಗೆ ತೀವ್ರ ಚರ್ಚೆ

KannadaprabhaNewsNetwork |  
Published : Jun 19, 2025, 11:48 PM IST
ಸ | Kannada Prabha

ಸಾರಾಂಶ

ಮಳೆನೀರು ಹೂಳು ತೆಗೆಯುವಿಕೆ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣಗಳ ಕುರಿತು ಸದಸ್ಯರ ನಡುವೆ ತೀವ್ರ ಚರ್ಚೆ ನಡೆಯಿತು.

ಕಾರವಾರ: ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಒತ್ತುವರಿ ಸಮಸ್ಯೆ, ಮಳೆನೀರು ಹೂಳು ತೆಗೆಯುವಿಕೆ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣಗಳ ಕುರಿತು ಸದಸ್ಯರ ನಡುವೆ ತೀವ್ರ ಚರ್ಚೆ ನಡೆಯಿತು.

ನಗರಸಭೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಜಾಗ ನೀಡಿದ ಮಾಲೀಕರಿಗೆ ಟಿಡಿಆರ್ ನೀಡುವ ವಿಷಯ ಪ್ರಸ್ತಾಪವಾಯಿತು. ರಸ್ತೆಗಳ ಬದಿಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಲ್ಲುತ್ತಿರುವುದು ಮತ್ತು ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುವ ಸಮಸ್ಯೆಯ ಬಗ್ಗೆ ಸದಸ್ಯರು ಕಳವಳ ವ್ಯಕ್ತಪಡಿಸಿದರು.

ಹೂಳು ತೆಗೆಯುವ ಕಾರ್ಯದಲ್ಲಿ ವಿಳಂಬ, ಲೋಪ:

ಸಭೆಯಲ್ಲಿ ಸದಸ್ಯ ಸಂದೀಪ್ ತಳೇಕರ್, ನಗರದಲ್ಲಿ 65 ಕಿ.ಮೀ. ಉದ್ದದ ಚರಂಡಿ ಹೂಳು ತೆಗೆಯಲು ಟೆಂಡರ್ ಆಗಿದ್ದರೂ, ಕೇವಲ 35 ಕಿ.ಮೀ. ಮಾತ್ರ ಹೂಳು ತೆಗೆಯಲಾಗಿದೆ ಎಂದು ಆರೋಪಿಸಿದರು.

ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ ಅವರು, ಇಬ್ಬರಿಗೆ ಮಾತ್ರ ಟೆಂಡರ್ ನೀಡುವ ಬಗ್ಗೆ ಪ್ರಶ್ನಿಸಿದರು. ನಗರದಲ್ಲಿ ಅಂಡರ್‌ಗ್ರೌಂಡ್ ಪಾರ್ಕಿಂಗ್ ಅಗತ್ಯವಿಲ್ಲ. ಅದರ ಬದಲು ಬೇರೆ ಯೋಜನೆಗಳ ಬಗ್ಗೆ ಕೆಡಿಎಗೆ ಠರಾವು ಮಾಡಿ ಸಲ್ಲಿಸುವಂತೆ ಆಗ್ರಹಿಸಿದರು.

ಬಿಣಗಾ ಮತ್ತು ಬೈತಖೋಲದಲ್ಲಿ ಜಲಾವೃತ ಸಮಸ್ಯೆ ಕುರಿತು ಸದಸ್ಯ ಪಿ.ಪಿ. ನಾಯ್ಕ ಪ್ರಸ್ತಾಪಿಸಿ, 2009ಕ್ಕೆ ಹೋಲಿಸಿದರೆ ಈ ಬಾರಿ ಬಿಣಗಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿದೆ ಎಂದು ಗಮನ ಸೆಳೆದರು. ರಾಜ ಕಾಲುವೆಗೆ ಪೈಪ್ ಹಾಕಿ ಮುಚ್ಚಿರುವುದರಿಂದ ಹಲವಾರು ಮನೆಗಳು ಜಲಾವೃತಗೊಂಡಿವೆ ಎಂದು ತಿಳಿಸಿದರು.

ಟಿಡಿಆರ್ ವಿವಾದ: ಸದಸ್ಯರ ಆಕ್ರೋಶ

ಸಭೆಯಲ್ಲಿ ಸದಸ್ಯ ಮಕ್ಬುಲ್ ಶೇಖ್, ಟಿಡಿಆರ್ ವಿತರಣೆಯಾಗದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 9 ವರ್ಷಗಳ ಹಿಂದೆ ನಗರಸಭೆ ಟಿಡಿಆರ್ ನೀಡುವುದಾಗಿ ಹೇಳಿದ್ದರೂ ಇದುವರೆಗೂ ನೀಡಿಲ್ಲ ಎಂದು ಆರೋಪಿಸಿದರು. ನಮ್ಮ ಮೇಲೆ ವಿಶ್ವಾಸವಿಟ್ಟು ಕೆಲವು ಜನರು ಸ್ವಯಂ ಪ್ರೇರಿತವಾಗಿ ತಮ್ಮ ಜಾಗ ಬಿಟ್ಟುಕೊಟ್ಟಿದ್ದಾರೆ. ನನ್ನ ವಾರ್ಡ್‌ನಲ್ಲಿ ಜನರು ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ ಕಂಪೌಂಡ್‌ಗಳನ್ನು ತೆರವುಗೊಳಿಸಿದ್ದಾರೆ ಎಂದರು.

ಪೌರಾಯಕ್ತರು ಪ್ರತಿಕ್ರಿಯಿಸಿ ಕಳೆದ 9 ವರ್ಷಗಳಿಂದ ಈ ವಿಷಯ ಏಕೆ ಚರ್ಚೆಯಾಗಿಲ್ಲ? ಏಕೆ ಈ ವಿಷಯವನ್ನು ಬಿಟ್ಟುಬಿಡಲಾಗಿದೆ? ಇದು ಸರಿಯಲ್ಲ. ಕಾರವಾರ-ಕೋಡಿಭಾಗ ರಸ್ತೆ ವ್ಯಾಪ್ತಿಯಲ್ಲಿ ಒಟ್ಟು 202 ಜನರ ಪೈಕಿ, 2016ರ ನಂತರ ಕೇವಲ ಏಳು ಜನ ಮಾತ್ರ ಟಿಡಿಆರ್ ಲಾಭ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸದಸ್ಯ ಸಂದೀಪ ತಳೇಕರ್ ಅವರು ಟಿಡಿಆರ್ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದರು. "ಟಿಡಿಆರ್ ಬಗ್ಗೆ ಜನರಿಗೆ ತಿಳಿಸಬೇಕು. ಟಿಡಿಆರ್ ಅನ್ನು ಮಾರಾಟ ಸಹ ಮಾಡಬಹುದು ಎಂಬುದರ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ನಗರಸಭೆಯ ಆರ್ಥಿಕ ಸುಧಾರಣೆ ಮತ್ತು ಮಾಸ್ಟರ್ ಪ್ಲಾನ್ ಸಮರ್ಪಕ ಅನುಷ್ಠಾನದ ಜೊತೆಗೆ ಟಿಡಿಆರ್ ವಿತರಣೆಯ ವಿಳಂಬವು ಸಭೆಯಲ್ಲಿ ಪ್ರಮುಖ ಚರ್ಚಾ ವಿಷಯವಾಯಿತು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ