ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾರ್ಮಿಕರಿಗೆ ಪ್ರಸ್ತುತ ಇರುವ ದಿನದಲ್ಲಿ 8 ಗಂಟೆಗಳ ಕೆಲಸದ ಅವಧಿಯನ್ನು 10 ಗಂಟೆಗಳಿಗೆ ಹೆಚ್ಚಿಸಿ ಶನಿವಾರ ಮತ್ತು ಭಾನುವಾರ ವಾರ ಎರಡು ದಿನ ರಜೆ ನೀಡುವುದು. ಇದಕ್ಕಾಗಿ ಕೇಂದ್ರ ಕಾರ್ಮಿಕ ಕಾಯ್ದೆಗೆ ಪೂರಕವಾಗಿ ರಾಜ್ಯದ ಅಂಗಡಿ ಮತ್ತು ವಾಣಿಜ್ಯಸ್ಥಾಪನೆ (ಶಾಪ್ ಆ್ಯಂಡ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್) ಕಾಯಿದೆಗೆ ತಿದ್ದುಪಡಿ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ. ಈ ಸಂಬಂಧ ಅಭಿಪ್ರಾಯ ಸಂಗ್ರಹಿಸಿಲು ಉತ್ಪಾದನಾ ವಲಯದ ಮುಖ್ಯಸ್ಥರು, ಕಾರ್ಮಿಕ ಸಂಘಟನೆಗಳು ಸೇರಿ ನಾನಾ ವಿಭಾಗದ ಮುಖ್ಯಸ್ಥರ ಜತೆಗೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರೋಹಿಣಿ ಸಿಂದೂರಿ ನೇತೃತ್ವದಲ್ಲಿ ಬುಧವಾರ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಎಫ್‌ಕೆಸಿಸಿಐ ಪ್ರತಿನಿಧಿಗಳು, ಹೊಟೇಲ್ ಉದ್ಯಮ, ಕಾರ್ಮಿಕ ಸಂಘಟನೆ ಮುಖ್ಯಸ್ಥರು, ಉದ್ಯಮಿಗಳು ಭಾಗವಹಿಸಿದ್ದರು.
ಇಲಾಖೆ ಮೂಲಗಳ ಪ್ರಕಾರ ಇದೇ ಮಳೆಗಾಲದ ಅಧಿವೇಶನದಲ್ಲಿ ಕಾರ್ಮಿಕ ಇಲಾಖೆ ಈ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸುವ ಸಾಧ್ಯತೆ ಹೆಚ್ಚಿದೆ. ಇದರ ಜತೆಗೆ ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ತಿದ್ದುಪಡಿ ಬಗ್ಗೆಯೂ ಚರ್ಚೆ ಪ್ರಾರಂಭವಾಗಿದೆ.ಕಾರ್ಮಿಕ ಸಂಘಟನೆಗಳ ಭಿನ್ನ ಅಭಿಪ್ರಾಯ:
ಸರ್ಕಾರದ ಚಿಂತನೆಯನ್ನು ಕಾರ್ಮಿಕರು ಅರ್ಥ ಮಾಡಿಕೊಂಡಿಲ್ಲ. ಇದು ಉತ್ತಮವಾಗಿದೆ. 10 ಗಂಟೆ ಅವಧಿ ಹೆಚ್ಚಿಸಿದರೂ ವಾರದಲ್ಲಿ ಎರಡು ದಿನ ರಜೆ ಇರುತ್ತದೆ. ಒಟ್ಟಾರೆ ಕೆಲಸದ ಅವಧಿ 48 ಗಂಟೆ ಇರುತ್ತದೆ. ಇದರಿಂದಾಗಿ ಉತ್ಪಾದನಾ ಸಾಮರ್ಥ್ಯ ಹೆಚ್ಚುವ ಜತೆಗೆ ಬೆಂಗಳೂರಿನಂಥ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅನುಕೂಲವಾಗುತ್ತದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ ಅಭಿಪ್ರಾಯಪಟ್ಟರು.