ಆಳ್ವಾಸ್‌ನ ಪುರುಷರ ತಂಡ ಸತತ 17ನೇ ಬಾರಿ, ಮಹಿಳೆಯರ ತಂಡ ಸತತ 14ನೇ ಬಾರಿ ವಿನ್ನರ್ಸ್ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ- ಖೋ ಟೂರ್ನಮೆಂಟ್-2025ರಲ್ಲಿ ಆಳ್ವಾಸ್ ಕಾಲೇಜಿನ ತಂಡ ಸಮಗ್ರ ಪ್ರಶಸ್ತಿ ಗಳಿಸಿದೆ.ಆಳ್ವಾಸ್‌ನ ಪುರುಷರ ತಂಡ ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಸತತ 17 ನೇ ಬಾರಿ ಹಾಗೂ ಮಹಿಳೆಯರ ತಂಡ ಎಚ್‌ವಿ ಕಮಲೇಶ್ ರೋಲಿಂಗ್ ಟ್ರೋಫಿಯನ್ನು ಸತತ 14ನೇ ಬಾರಿ ಪಡೆದವು.
ಪುರುಷರ ವಿಭಾಗದಲ್ಲಿ ಆಳ್ವಾಸ್ ಪುರುಷರ ಖೋ-ಖೋ ತಂಡ 27-5 ಅಂಕಗಳ ಅಂತರದಿಂದ ಪುತ್ತೂರಿನ ವಿವೇಕಾನಂದ ಕಾಲೇಜು ವಿರುದ್ಧ ಗೆಲವು ಸಾಧಿಸಿದರೆ, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ತಂಡ ಏಕಪಕ್ಷೀಯವಾಗಿ 18-0 ಅಂಕಗಳ ಅಂತರದಲ್ಲಿ ಬೆಳ್ತಂಗಡಿಯ ಜಿಎಫ್‌ಜಿಸಿ ಕಾಲೇಜು ವಿರುದ್ಧ ಗೆಲವು ಸಾಧಿಸಿ ಎರಡು ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಭಾಜನವಾಯಿತು.ವೈಯಕ್ತಿಕ ಪುರುಷರ ಚಾಂಪಿಯನ್‌ಶಿಪ್‌ನಲ್ಲಿ ‘ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ’ಗೆ ಆಳ್ವಾಸ್ ಕಾಲೇಜಿನ ನಿಖಿಲ್ ಮತ್ತು ‘ಬೆಸ್ಟ್ ಡಿಫೆಂಡರ್ ಪ್ರಶಸ್ತಿ’ಗೆ ಪ್ರಮೋದ್ ಡಿ ಹಾಗೂ ವೈಯಕ್ತಿಕ ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲಿ ‘ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ’ಗೆ ಆಳ್ವಾಸ್ ಕಾಲೇಜಿನ ಪ್ರೇಕ್ಷಾ ಮತ್ತು ‘ಬೆಸ್ಟ್ ಚೇಸರ್’ ಪ್ರಶಸ್ತಿಗೆ ಕವನ ಪಾತ್ರರಾದರು.
ಪುರುಷರ ವಿಭಾಗದ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿಗೆ 4ನೇ ಸ್ಥಾನ, ಹಂಪನಕಟ್ಟೆ ವಿ. ವಿ ಕಾಲೇಜಿಗೆ ತೃತೀಯ ಸ್ಥಾನ, ಪುತ್ತೂರಿನ ವಿವೇಕಾನಂದ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ ಮತ್ತು ಆಳ್ವಾಸ್ ಕಾಲೇಜಿಗೆ ಸತತ 17ನೇ ಬಾರಿ ಸಮಗ್ರ ಪ್ರಶಸ್ತಿ ಲಭಿಸಿತು.ಮಹಿಳೆಯರ ವಿಭಾಗದ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ತೃತೀಯ ಸ್ಥಾನ, ಬೆಳ್ತಂಗಡಿಯ ಜಿಎಫ್‌ಜಿಸಿ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ ಮತ್ತು ಆಳ್ವಾಸ್ ಕಾಲೇಜಿಗೆ ಸತತ 14ನೇ ಬಾರಿ ಸಮಗ್ರ ಪ್ರಶಸ್ತಿ ಲಭಿಸಿತು.
ಸಮಾರೋಪ ಸಮಾರಂಭ:ದೇಸಿ ಕ್ರೀಡೆಯಾದ ಖೋ- ಖೋ ಆಟವು ಕ್ರೀಡಾಳುಗಳಲ್ಲಿ ಉತ್ತಮ ಕ್ರೀಡಾ ಮನೋಭಾವವನ್ನು ಹುಟ್ಟು ಹಾಕುವ ಶಕ್ತಿ ಹೊಂದಿದೆ ಎಂದು ಆಳ್ವಾಸ್ ಪ. ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ ಎಂ ಸದಾಕತ್ ನುಡಿದರು.
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಮಾನವೀಯತೆ ಸಾರುವ ಮನೋಭಾವ ಬೆಳೆಸಿಕೊಳ್ಳಿ ಎಂದು ತಿಳಿಸಿದರು.ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಡಾ ಪ್ರಸನ್ನ ಕುಮಾರ್ ಬಿ ಕೆ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ ಮಧು ಜಿ ಆರ್ , ಆಳ್ವಾಸ್ ಹಣಕಾಸು ಅಧಿಕಾರಿ ಶಾಂತಾರಾಮ್ ಕಾಮತ್, ಆಳ್ವಾಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಿಲಕ್ ಶೆಟ್ಟಿ ಮತ್ತಿತರರಿದ್ದರು.
ವಿದ್ಯಾರ್ಥಿನಿ ನಿಯಾ ಸೆಬಾಸ್ಟಿಯನ್ ನಿರೂಪಿಸಿದರು.