ಕದಂಬೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಲಾವಿದರಿಗೆ ಆದ್ಯತೆ

KannadaprabhaNewsNetwork | Published : Mar 20, 2025 1:16 AM

ಸಾರಾಂಶ

ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಏ. ೧೨ ಮತ್ತು ೧೩ರಂದು ಕದಂಬೋತ್ಸವ ನಡೆಯಲಿದ್ದು, ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಹೇಳಿದ್ದಾರೆ. ಪೂರ್ವಭಾವಿ ಸಭೆ ನಡೆಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.

ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಏ. ೧೨ ಮತ್ತು ೧೩ರಂದು ಜರುಗುವ ಕದಂಬೋತ್ಸವದ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಳ್ಳುವ ಕಲಾವಿದರು ಏ. ೧ರೊಳಗೆ ಶಿರಸಿ ಸಹಾಯಕ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಹೇಳಿದರು.

ಅವರು ಬುಧವಾರ ನಗರದ ತಾಲೂಕು ಆಡಳಿತ ಸೌಧದಲ್ಲಿ ನಡೆದ ಕದಂಬೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕದಂಬೋತ್ಸವ ಯಶಸ್ಸಿಗೆ ೧೫ ಸಮಿತಿ ರಚಿಸಲಾಗಿದೆ. ಎಲ್ಲರಿಗೂ ಅವರವರ ಜವಾಬ್ದಾರಿ ನೀಡಲಾಗಿದ್ದು, ಪ್ರತಿಯೊಬ್ಬರೂ ತಮಗೆ ನೀಡಿದ ಜವಾಬ್ದಾರಿಯನ್ನು ಶಿಸ್ತುಬದ್ಧವಾಗಿ ನಿರ್ವಹಿಸಬೇಕು ಎಂದು ಸೂಚಿಸಿದ ಅವರು, ಕದಂಬೋತ್ಸವದ ಪ್ರಮುಖ ಆಕರ್ಷಣೆಯಾದ ಸಾಂಸ್ಕೃತಿಕ ಸಂಭ್ರಮದಲ್ಲಿ ರಾಜ್ಯ ಹಾಗೂ ಜಿಲ್ಲೆಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕಲಾವಿದರು ತಮ್ಮ ಸ್ವವಿವರದ ಅರ್ಜಿಯನ್ನು ಏ. ೧ರೊಳಗೆ ಶಿರಸಿ ಉಪವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಉತ್ಸವದ ಪ್ರಚಾರಕ್ಕೆ ಸಂಬಂಧಿಸಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು. ಪ್ಲೆಕ್ಸ್, ಪೋಸ್ಟರ್, ಬ್ಯಾನರ್‌ಗಳನ್ನು ಮುದ್ರಿಸಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ ಹಾಗೂ ನೆರೆಹೊರೆಯ ಜಿಲ್ಲೆಗಳಲ್ಲಿ ಪ್ರಕಟಿಸಲಾಗುವುದು ಎಂದ ಅವರು, ಕುಸ್ತಿ, ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆ ಏರ್ಪಡಿಸಲಾಗುವುದು. ಈ ಕುರಿತು ಕ್ರೀಡಾ ಸಮಿತಿಗೆ ಜವಾಬ್ದಾರಿ ನೀಡಲಾಗಿದೆ. ಆ್ಯಂಬುಲೆನ್ಸ್ ಸೇರಿದಂತೆ ಪ್ರಾಥಮಿಕ ತುರ್ತು ಚಿಕಿತ್ಸಾ ಕ್ರಮ ಕೈಗೊಳ್ಳಲು ವೇದಿಕೆ ಬಳಿ ವ್ಯವಸ್ಥೆ ಕಲ್ಪಿಸಲಾಗುವುದು. ಭದ್ರತೆ ಸಂಬಂಧ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಸೂಚಿಸಲಾಗಿದೆ. ಉತ್ಸವದ ಅಂಗವಾಗಿ ಗುಡ್ನಾಪುರದಲ್ಲಿ ಒಂದು ದಿನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು. ಜತೆಗೆ ಕದಂಬ ಜ್ಯೋತಿ ಮೆರವಣಿಗೆಗೆ ಅದ್ಧೂರಿ ಸಿದ್ಧತೆ ಮಾಡಲಾಗುವುದು ಎಂದರು.

ಮುಖ್ಯಮಂತ್ರಿಯಿಂದ ಉದ್ಘಾಟನೆ:

ಕನ್ನಡ ಮೊದಲ ರಾಜಧಾನಿ ಬನವಾಸಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕದಂಬೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು ಸೇರಿದಂತೆ ವಿವಿಧ ಸ್ತರದ ಜನಪ್ರತಿನಿಧಿಗಳು ಪಾಲ್ಗೊಳ್ಳುವುದರಿಂದ ಶಿಸ್ತುಬದ್ಧ ಮತ್ತು ಅದ್ಧೂರಿಯಾಗಿ ಆಚರಿಸಲು ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಹೇಳಿದರು.

ಡಿಎಸ್‌ಪಿ ಕೆ.ಎಲ್. ಗಣೇಶ, ಸಿಪಿಐ ಶಶಿಕಾಂತ ವರ್ಮಾ, ಶಿರಸಿ ತಹಸೀಲ್ದಾರ್‌ ಶೈಲೇಶ ಪಿ., ಮುಂಡಗೋಡ ತಹಸೀಲ್ದಾರ್‌ ಶಂಕರ ಗೌಂಡಿ, ಪೌರಾಯುಕ್ತ ಕಾಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಸಾರಿಗೆ ಘಟಕ ವ್ಯವಸ್ಥಾಪಕ ಸವೇಶ ಮತ್ತಿತರರು ಇದ್ದರು.

Share this article