ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಅಂತರ ಗ್ರಾಮ ಹಾಕಿ ಟೂರ್ನಮೆಂಟ್ ನಡೆಯಿತು. ಈ ಟೂರ್ನಿಯಲ್ಲಿ ಬಲ್ಲಮಾವಟಿ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟ ಹಾಗೂ ಅಂತರಗ್ರಾಮ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಬಲ್ಲಮಾವಟಿ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಅಂತಿಮ ಪಂದ್ಯದಲ್ಲಿ ನೆಲಜಿ –ಎ ತಂಡದ ವಿರುದ್ಧ ಆಟವಾಡಿದ ಬಲ್ಲಮಾವಟಿ ತಂಡವು 1-0 ಅಂತರದಿಂದ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪೇರೂರು-ಎ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಹಾಕಿ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಕಾಫಿ ಬೆಳೆಗಾರ ಮೂವೇರ ನಾಣಪ್ಪ ನೀಡಿದ ರೋಲಿಂಗ್ ಟ್ರೋಫಿ ಹಾಗೂ ಅಪ್ಪಚೆಟ್ಟೋಳಂಡ ಕುಟುಂಬ ನೀಡಿದ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ನೆಲಜಿ-ಎ ತಂಡಕ್ಕೆ ಮೂವೇರ ನಾಣಪ್ಪ ನೀಡಿದ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.
ವಿವಿಧ ಗ್ರಾಮಗಳ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಹಗ್ಗ ಜಗ್ಗಾಟದ ಪಂದ್ಯದ ಅಂತಿಮ ಸ್ಪರ್ಧೆಯಲ್ಲಿ ಬಲ್ಲಮಾವಟಿ ತಂಡವು ಪ್ರಶಸ್ತಿ ಗಳಿಸಿತು. ದೊಡ್ಡಪುಲಿಕೋಟು ತಂಡವು ದ್ವಿತೀಯ ಬಹುಮಾನ ಪಡೆದುಕೊಂಡಿತು.
ಇವರಿಗೆ ನೆರವಂಡ ಅಪ್ಪಣ್ಣ ನೀಡಿದ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪೇರೂರು- ಎ ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಈ ತಂಡಕ್ಕೆ ನೆರವಂಡ ದರ್ಶನ್ ನೀಡಿದ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಅಂತರ ಗ್ರಾಮ ಹಾಕಿ ಟೂರ್ನಿಯಲ್ಲಿ ಏಳು ತಂಡಗಳು ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಐದು ತಂಡಗಳು ಪಾಲ್ಗೊಂಡಿದ್ದವು. ಹಾಕಿ ಟೂರ್ನಿಯ ತೀರ್ಪುಗಾರರಾಗಿ ಹಾಕಿ ಕೂರ್ಗ್ ನ ತೀರ್ಪುಗಾರರಾದ ಕರವಂಡ ಅಪ್ಪಣ್ಣ ತಂಡ ಕಾರ್ಯ ನಿರ್ವಹಿಸಿದರು. ಟೂರ್ನಿಯ ಉತ್ತಮ ಆಟಗಾರ ಪ್ರಶಸ್ತಿಯನ್ನು ಅಪ್ಪಚೆಟ್ಟೋಳಂಡ ಅಯ್ಯಪ್ಪ ಪಡೆದುಕೊಂಡರು. ಅಪ್ಪಚೆಟ್ಟೋಳಂಡ ಅಯ್ಯಪ್ಪ, ತಾಪಂಡ ಅಪ್ಪಣ್ಣ ಟೂರ್ನಿಯ ಯಶಸ್ಸಿಗೆ ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.