ಸತತ ಸೋಲುಗಳ ಆತ್ಮಾವಲೋಕನ । ಸದೃಢ ಭವಿಷ್ಯಕ್ಕಾಗಿ ಸಂಘಟನೆ ಬಲವರ್ಧನೆಗೆ ನಿರ್ಧಾರ । ದೊಡ್ಡಬಳ್ಳಾಪುರದಲ್ಲಿ ನಡೆದ ಕಾರ್ಯಕರ್ತರ ಸಭೆ
ಸತತ 4 ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಸೋಲು ಕಂಡಿದ್ದು, ಆತ್ಮಾವಲೋಕನದೊಂದಿಗೆ ಬಲಿಷ್ಠ ಸಂಘಟನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವುದರ ಜೊತೆಗೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸುವ ಸ್ಪೂರ್ತಿದಾಯಕ ನಡೆ ಅಗತ್ಯವಾಗಿದೆ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ 2024ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಳೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣದ ಆರ್ಭಟದಿಂದ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಇದರಿಂದ ಕಾರ್ಯಕರ್ತರು ಹತಾಶರಾಗಿದ್ದರು. ಅವರಲ್ಲಿ ನವ ಚೈತನ್ಯ ಮೂಡಿಸಿ ಹುರಿದುಂಬಿಸುವ ಅಗತ್ಯವಿದೆ. ತಾಲೂಕಿನಲ್ಲಿ ಹೊಸ ವರ್ಷದಿಂದ ಜೆಡಎಸ್‌ನ ಹೊಸ ಪರ್ವ ಆರಂಭವಾಗಲಿದೆ ಎಂದರು.
ಬಿಜೆಪಿ ಅಭ್ಯರ್ಥಿ ಹರಿಸಿದ ಹಣದ ಹೊಳೆಯಿಂದಾಗಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ ಸೇವಾ ಕಾರ್ಯದ ಮೂಲಕ ಮತ್ತೆ ಪಕ್ಷವನ್ನು ಸಂಘಟಿಸಲು ಎಲ್ಲರ ಸಹಕಾರ ಅಗತ್ಯವಿದೆ. 2024ರಲ್ಲಿ ಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸದೃಢವಾಗಿ ಪುನಶ್ಚೇತನಗೊಳಿಸುವ ಸಂಕಲ್ಪ ಮಾಡಬೇಕಿದೆ ಎಂದರು.
ಪಕ್ಷದ ಮುಖಂಡ ಸಾರಥಿ ಸತ್ಯಪ್ರಕಾಶ್ ಮಾತನಾಡಿ, ಸತತವಾಗಿ 4 ಚುನಾವಣೆಗಳಲ್ಲಿ ಪರಾಭವಗೊಂಡರೂ ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಉತ್ಸಾಹ ಕುಗ್ಗಿಲ್ಲ. ಸೋಲುಗಳಿಂದ ಕಲಿತ ಪಾಠ ಮುಂದಿನ ಯಶಸ್ಸಿಗೆ ದಾರಿಯಾಗುತ್ತದೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು ಮತ್ತೆ ಕುಮಾರಸ್ವಾಮಿ ಅಧಿಕಾರ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿಕುಮಾರ್ ಮಾತನಾಡಿ, ಸತತ ಸೋಲುಗಳ ಪರಿಣಾಮ ಪಕ್ಷದ ಕಾರ್ಯಕರ್ತರು ಭವಿಷ್ಯಕ್ಕಾಗಿ ಬೇರೆ ಬೇರೆ ಪಕ್ಷಕ್ಕೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪಕ್ಷ ಮತ್ತೆ ಬಲಗೊಳ್ಳುವ ಮುನ್ಸೂಚನೆ ದೊರೆತಿದೆ. ವಿಶ್ವಾಸ ಹೆಚ್ಚಿದೆ ಎಂದರು.
ಪಕ್ಷದ ಹಲವು ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.