ಸಿಎಂ ‘ನೀರು ಕುಡಿಸುವ’ ಸ್ವಾರಸ್ಯಕರ ಚರ್ಚೆ

KannadaprabhaNewsNetwork |  
Published : Mar 26, 2026, 02:00 AM IST
ಸದನ ಕಲಾಪ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ ದನಕರುಗಳಿಗೆ ನೀರು ಕುಡಿಸುತ್ತಿದ್ದ ವಿಷಯ ಬುಧವಾರ ಸದನಲ್ಲಿ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ ದನಕರುಗಳಿಗೆ ನೀರು ಕುಡಿಸುತ್ತಿದ್ದ ವಿಷಯ ಬುಧವಾರ ಸದನಲ್ಲಿ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು. ಈ ಸಂದರ್ಭವನ್ನು ಬಳಸಿಕೊಂಡ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ನೀರು ಕುಡಿಸುವ ಕಲೆ ಆಗಿನಿಂದಲೇ ಕರಗತವಾಗಿರುವುದಕ್ಕೆ ಎಂಟು ವರ್ಷಗಳಿಂದ ನೀವೇ ಸಿಎಂ ಆಗಿ ನಿಮ್ಮ ಪಕ್ಕದಲ್ಲಿರುವವರು(ಡಿ.ಕೆ.ಶಿವಕುಮಾರ್‌) ಹಾಗೂ ಹಿಂದೆ, ಮುಂದೆ ಇರುವ ನಮ್ಮೆಲ್ಲರಿಗೂ ನೀರು ಕುಡಿಸುತ್ತಿದ್ದೀರಿ ಎಂದು ಕಾಲೆಳೆದ ಘಟನೆ ನಡೆಯಿತು.

ಬಜೆಟ್‌ ಮೇಲಿನ ಚರ್ಚೆಗೆ ಬುಧವಾರ ಉತ್ತರ ನೀಡಿದ ಮುಖ್ಯಮಂತ್ರಿ ಅವರು, ಸಂದರ್ಭೋಚಿತವಾಗಿ ತಾವು ಬಿಎಸ್ಸಿ ಓದುವ ವೇಳೆ ತಮ್ಮ ತಂದೆ ಬಾವಿವಿಂದ ನೀರು ಸೇದಿ ದನಕರುಗಳಿಗೆ ಮಧ್ಯಾಹ್ನ ನೀರು ಕುಡಿಸುವ ಕೆಲಸ ಹಚ್ಚಿದ್ದರು ಎಂದು ಪ್ರಸ್ತಾಪಿಸಿದರು. ಈ ಮಾತು ಕೇಳಿ ನಗಲಾರಂಭಿಸಿದ ಆರ್‌.ಅಶೋಕ್‌, ನಿಮ್ಮ ತಂದೆ ಬಹಳ ದೂರದೃಷ್ಟಿಯಿಂದಲೇ ನೀರು ಕುಡಿಸುವ ಕೆಲಸ ನಿಮಗೆ ಕೊಟ್ಟಿದ್ದರು ಎನಿಸುತ್ತದೆ. ಅದಕ್ಕೇ ಈಗ ನೀವು ನಿಮ್ಮ ಪಕ್ಕದಲ್ಲಿರುವವರಿಗೆ (ಡಿ.ಕೆ.ಶಿವಕುಮಾರ್), ನಿಮ್ಮೆ ಹಿಂದೆ, ಮುಂದೆ ಇರುವ ಎಲ್ಲರಿಗೂ ನೀರು ಕುಡಿಸಿ ಎಂಟು ವರ್ಷಗಳಿಂದ ನೀವೇ ಸಿಎಂ ಆಗಿದ್ದೀರಿ. ಕುಡಿಸೋದು ಕುಡಿಸುತ್ತೀರಿ ಸ್ವಲ್ಪ ಉಪ್ಪುಕಾರ ಹಾಕಿ ಕುಡಿಸಿ ಎಂದು ಕಿಚಾಯಿಸಿದರು.

ನೀನು ದನಾನ-ಸಿಎಂ ಟಾಂಗ್‌:

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಶೋಕ್‌ ನಾನು ದನಕರುಗಳಿಗೆ ನೀರು ಕುಡಿಸುತ್ತಿದ್ದೆ ಅಂತ ಹೇಳಿದ್ದು. ನೀನು ನಮ್ಮೆಲ್ಲರಿಗೂ ನೀರು ಕುಡಿಸಿದ್ದೀರಿ ಅನ್ನುತ್ತಿದ್ದೀಯಲ್ವಾ, ನೀನೇನು ದನಾನ! ನಿಮಗೆ(ಪ್ರತಿಪಕ್ಷದವರಿಗೆ) ನಾನು ಕುಡಿಸಿರುವುದು ರಾಜಕೀಯ ನೀರು. ಡಿ.ಕೆ.ಶಿವಕುಮಾರ್‌ ಅವರು, ನನ್ನ ಸಂಪುಟ ಸಹೋದ್ಯೋಗಿ. ನಮ್ಮ ಪಕ್ಷದಲ್ಲಿ ಏನೇನು ನಡೆಯುತ್ತಿದೆ ಎಂದು ನೋಡಿಕೊಳ್ಳಲು ಹೈಕಮಾಂಡ್‌ ಇದೆ ಎಂದು ಡಿ.ಕೆ.ಶಿವಕುಮಾರ್‌ ಅವರ ಕಡೆ ನೋಡಿಕೊಂಡು ಹೇಳುತ್ತಿದ್ದರು. ಆಗ ಅಶೋಕ್‌, ಅದನ್ನು ನಮ್ಮನ್ನೂ ನೋಡಿಕೊಂಡು ಹೇಳಿ ಡಿ.ಕೆ.ಶಿವಕುಮಾರ್‌ ಅವರನ್ನು ನೋಡಿಕೊಂಡು ಏಕೆ ಹೇಳುತ್ತಿದ್ದೀರಿ ಎಂದು ಮತ್ತೆ ಕಾಲೆಳೆದರು.

ಇದಕ್ಕೆ ಮುಖ್ಯಮಂತ್ರಿ ಅವರು, ನಾನು ಡಿ.ಕೆ.ಶಿವಕುಮಾರ್‌ ನೋಡಿಕೊಂಡು ಹೇಳಿದ್ದಲ್ಲ. ಇಲ್ಲಿ ಪರಮೇಶ್ವರ್‌, ಎಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌ ಸೇರಿ ನಮ್ಮ ಅನೇಕ ಸಚಿವರು, ಶಾಸಕರು ಇದ್ದಾರೆ. ಎಲ್ಲರನ್ನೂ ನೋಡಿಕೊಂಡು ಹೇಳಿದ್ದೇನೆ. ಹಾಗಾದರೆ ಪಕ್ಕದವರಿಗೆ (ಡಿ.ಕೆ.ಶಿವಕುಮಾರ್‌) ಯಾವ ನೀರು ಕುಡಿಸುತ್ತೀರಿ ಅಂತ ಹೇಳಿ ಎಂದು ವಿಪಕ್ಷದವರ ಪ್ರಶ್ನೆಗೆ, ಅವರು ಅವರ ಮನೆಯ ನೀರು ಕುಡಿಯುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವನ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ: ಡಾ.ಸಿ.ಸೋಮಶೇಖರ್
ಮದ್ದೂರು ನಗರಸಭೆ: 1.15 ಕೋಟಿ ರು. ಉಳಿತಾಯ ಬಜೆಟ್ ಮಂಡನೆ