ಒಳ ಮೀಸಲಾತಿ ಜಾರಿ ಶೇ. 50 ದಾಟದಿರಲಿ

KannadaprabhaNewsNetwork |  
Published : Aug 22, 2025, 01:00 AM IST

ಸಾರಾಂಶ

ಎಂಪಿರಿಕಲ್ ಡಾಟಾ ಪ್ರಕಾರ, ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಶೇ. 7ರಷ್ಟು ಮೀಸಲಾತಿ ಸಿಗಬೇಕಿತ್ತು

ಗದಗ: ಒಳ ಮೀಸಲಾತಿ ಜಾರಿ ನಿರ್ಧಾರವು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು, ಶೇ. 50ರಷ್ಟು ಮೀರಬಾರದು. ಈ ವಿಷಯದಲ್ಲಿ ಸರ್ಕಾರ ಗಮನ ನೀಡಬೇಕು ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷ ಮೋಹನದಾಸ ಅಲಮೇಲಕರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮೋಹನದಾಸ್ ಕಮಿಟಿ ವರದಿಯನ್ನು ಸಮರ್ಪಕವಾಗಿ ಜಾರಿಗೊಳಿಸದೆ ಸರ್ಕಾರ ಸಣ್ಣ ದಲಿತ ಮತ್ತು ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

​ಪ್ರಸ್ತುತ ಒಳ ಮೀಸಲಾತಿ ಹಂಚಿಕೆಯಿಂದಾಗಿ ಒಟ್ಟು ಮೀಸಲಾತಿ ಪ್ರಮಾಣ ಶೇ. 50ರ ಗಡಿ ದಾಟಿದೆ. ಇದು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸವಾಲುಗಳಿಗೆ ಕಾರಣವಾಗಬಹುದು. ಇತರ ಸಮುದಾಯಗಳು ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೆ, ಈ ಇಡೀ ಪ್ರಕ್ರಿಯೆ ಮತ್ತೆ ಗೊಂದಲಮಯವಾಗಬಹುದು. ಆದ್ದರಿಂದ ಸರ್ಕಾರ ಕೂಡಲೇ ಈ ಸಮಸ್ಯೆ ಸರಿಪಡಿಸಿ ಕಾನೂನು ತೊಡಕುಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ಮಂಜು ಬುರುಡಿ ಎಂಪಿರಿಕಲ್ ಡಾಟಾ ಪ್ರಕಾರ, ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಶೇ. 7ರಷ್ಟು ಮೀಸಲಾತಿ ಸಿಗಬೇಕಿತ್ತು. ಆದರೆ ರಾಜ್ಯ ಸರ್ಕಾರ ನಮ್ಮ ಸಮುದಾಯಕ್ಕೆ ಕೇವಲ ಶೇ. 6 ಮೀಸಲಾತಿ ನೀಡಿ ದೊಡ್ಡ ಅನ್ಯಾಯ ಮಾಡಿದೆ. ಇದು ತಾತ್ಕಾಲಿಕ ಜಯ ಮಾತ್ರ ಎಂದರು.

ಮತ್ತೊಬ್ಬ ಮುಖಂಡ ಅಶೋಕ ಕುಡತಿನ್ನಿ ಮಾತನಾಡಿ, ಇದು ನಮ್ಮ ಸಮುದಾಯಕ್ಕೆ ಉಸಿರು ಆಡಲು ಸಿಕ್ಕಿ ಜಯವಾಗಿದೆ ಎಂದರು. ಯುವ ಮುಖಂಡ ಚಂದ್ರು ಹರಿಜನ ಮಾತನಾಡಿ, ಸರ್ಕಾರ ನೂರಾರು ಕೋಟಿ ಖರ್ಚು ಮಾಡಿ ಹಲವಾರು ಸಮಿತಿ ರಚನೆ ಮಾಡಿ ಅದರ ವರದಿ ಪಡೆದಿದ್ದರೂ ಅದನ್ನು ಪರಿಗಣಿಸದೇ ಬಲಾಢ್ಯರ ಒತ್ತಡಕ್ಕೆ ಮಣಿದು ಈ ಒಳ ಮೀಸಲಾತಿ ಜಾರಿ ಮಾಡಿದೆ. ನಮ್ಮ ಹೋರಾಟ ಕೇವಲ ಮಾದಿಗರಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಎಲ್ಲ ದಲಿತ ಸಮುದಾಯಗಳಿಗೂ ನ್ಯಾಯ ಸಿಗಬೇಕು ಎನ್ನುವುದಾಗಿದೆ. ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಮುಖಂಡ ಉಡಚಪ್ಪ ಹಳ್ಳಿಕೇರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರದ ಮೂಲಕ ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ.‌ ಅಲೆಮಾರಿ ಸೇರಿದಂತೆ ಸಣ್ಣ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

​ಈ ಸುದ್ದಿಗೋಷ್ಠಿಯಲ್ಲಿ ಸತೀಶ ಪಾಸಿ, ಡಿ.ಜಿ. ಕಟ್ಟಿಮನಿ, ಬಸವರಾಜ ಮುಳ್ಳಾಳ, ನಿಂಗಪ್ಪ ದೊಡ್ಡಮನಿ, ಮಂಜುನಾಥ ಗಜಾಕೋಶ, ಗಣೇಶ ಹುಬ್ಬಳ್ಳಿ, ರಾಘವೇಂದ್ರ ಪರಾಪgರ, ಪುಂಡಲೀಕ ಕಲ್ಮನಿ, ಶೇಖಪ್ಪ ಮಾದರ, ಶಿವು ಪೂಜಾರ, ಮರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ