ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಸಂಬಂಧ ಎಲ್ಲರನ್ನೂ ಬೀದಿಯಲ್ಲಿ ನಿಲ್ಲಿಸಿ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂಬ ರೀತಿಯಲ್ಲಿ ತೀರ್ಮಾನ ಮಾಡಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಸಂಬಂಧ ಎಲ್ಲರನ್ನೂ ಬೀದಿಯಲ್ಲಿ ನಿಲ್ಲಿಸಿ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂಬ ರೀತಿಯಲ್ಲಿ ತೀರ್ಮಾನ ಮಾಡಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ತೀರ್ಮಾನ ಮಾಡುವಾಗ ಉಪ ಮುಖ್ಯಮಂತ್ರಿ ಊರಲ್ಲೇ ಇರಲಿಲ್ಲ. ಬಹುಶಃ ಇದು ಅವರಿಗೂ ತೃಪ್ತಿಕರವಲ್ಲ ಎಂಬುದು ಗೊತ್ತಿತ್ತು. ಈ ತೀರ್ಮಾನಕ್ಕೆ ಬರಲು ಇವರಿಗೆ ಮೂರು ವರ್ಷ ಬೇಕಾಗಿದೆ. ಮೂರೇ ತಿಂಗಳಲ್ಲಿ ಮಾಡಬಹುದಿತ್ತಲ್ಲವೇ ಎಂದು ಕೇಳಿದರು.
4 ಲಕ್ಷ ಹುದ್ದೆಗೆ ಒಳಮೀಸಲು ಬೇಕಿತ್ತು:
ನಾಲ್ಕು ಲಕ್ಷ ಹುದ್ದೆ ತುಂಬಲು ಒಳ ಮೀಸಲಾತಿ ಆಗಬೇಕಿತ್ತು. ಎರಡು ಗಂಡಾಂತರಕ್ಕೆ ಸರ್ಕಾರ ಸಿಕ್ಕಿ ಹಾಕಿಕೊಂಡಿತ್ತು. ಖಾಜಿ ನ್ಯಾಯದ ತೀರ್ಮಾನ ಇದು. ಪರಿಶಿಷ್ಟ ಜಾತಿಗಳು ಬೀದಿಗೆ ಬಿದ್ದಂತಾಗಿದೆ. ಯುವ ಜನ 56 ಸಾವಿರಕ್ಕೂ ಹೆಚ್ಚು ಹುದ್ದೆ ಭರ್ತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದರು.
ಸಚಿವರು ಜನಾಂಗದ ಪರ ನಿಲ್ಲಬೇಕಿತ್ತೇ ಹೊರತು ಕಾಂಗ್ರೆಸ್ಸಿನ ಪರವಾಗಿ ಅಲ್ಲ. ಮೀಸಲಾತಿ ಕೇಳುವಲ್ಲಿ ಕಾಂಗ್ರೆಸ್ ಸಚಿವರು ಸಂಪೂರ್ಣವಾಗಿ ಎಡವಿದ್ದಾರೆ. ಇವರು ಸಮಾಜಗಳಿಗೆ ಅನ್ಯಾಯ, ದೋಖಾ ಮಾಡಿದ್ದಾರೆ. ಈ ಒಳ ಮೀಸಲಾತಿ ಹಂಚಿಕೆ ಕೋರ್ಟಿನಲ್ಲಿ ನಿಲ್ಲುವುದಿಲ್ಲ. ನಾವಿದನ್ನು ವಿರೋಧಿಸುವುದಾಗಿ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ವರದಿ ತಿರಸ್ಕಾರದಲ್ಲಿ ಸಿದ್ದು ದಾಖಲೆ:
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಒಳ ಮೀಸಲಾತಿ ಸಂಬಂಧ ಅನೇಕ ಆಯೋಗ ರಚಿಸಿ ವರದಿ ಪಡೆದು ಬಳಿಕ ಎಲ್ಲವನ್ನೂ ತಿರಸ್ಕರಿಸಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಮೂರು ವರ್ಷಗಳ ಬಳಿಕ ಒಳ ಮೀಸಲಾತಿ ವಿಚಾರಕ್ಕೆ ಕೊನೆ ಮೊಳೆ ಹೊಡೆದಿದ್ದಾರೆ. ದಲಿತರ ದಿಕ್ಕು ತಪ್ಪಿಸುವ ತೀರ್ಮಾನ ಮಾಡಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎಸ್‍ಸಿ, ಎಸ್‍ಟಿ ಮೀಸಲಾತಿಯನ್ನು ಹೆಚ್ಚಿಸಿದ್ದರು. ಅಲ್ಲಿಂದ ನಾಲ್ಕು ಶೈಕ್ಷಣಿಕ ವರ್ಷಗಳಲ್ಲಿ ಎಸ್‍ಸಿ, ಎಸ್‍ಟಿ ಮಕ್ಕಳಿಗೆ ಇಂಜಿನಿಯರಿಂಗ್, ಮೆಡಿಕಲ್ ಸೀಟುಗಳು ಹೆಚ್ಚುವರಿ ಮೀಸಲಾತಿ ಆಧಾರದಲ್ಲಿ ಲಭಿಸಿವೆ. ಉದ್ಯೋಗ ಮೀಸಲಾತಿಗೆ ಇದ್ದ ತಡೆಯಾಜ್ಞೆ ತೆರವಿಗೆ ನೀವೇನು ಪ್ರಯತ್ನ ಮಾಡಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.ಬೆಟ್ಟ ಅಗೆದು ಇಲಿ ಹಿಡಿದ ಹಾಗೆ ಒಳಮೀಸಲು ಜಾರಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಟ್ಟ ಅಗೆದು ಇಲಿ ಹಿಡಿದಂತೆ ಒಳ ಮೀಸಲಾತಿ ಜಾರಿಗೊಳಿಸುವ ಮುಖಾಂತರ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಎಂ.ಕಾರಜೋಳ ಕಿಡಿಕಾರಿದ್ದಾರೆ.ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನೀವೇ ನೇಮಿಸಿದ್ದ ನ್ಯಾ.ನಾಗಮೋಹನ ದಾಸ್ ಸಮಿತಿ ವರದಿ ಅವೈಜ್ಞಾನಿಕ ಎಂಬ ಕಾರಣಕ್ಕೆ ತಿರಸ್ಕರಿಸಿದ್ದೀರಾ? ನೀವೇ ರಚಿಸಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಮಿತಿ ವರದಿ ವೈಜ್ಞಾನಿಕ ಎಂದು ಒಪ್ಪಿಕೊಂಡಿದ್ದೀರಾ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ನಾಗಮೋಹನ ದಾಸ್ ಅವರ ವರದಿಯಲ್ಲಿ ಶೇ.17 ಎಂದಿದ್ದರೂ ಶೇ.15ಕ್ಕೆ ಸೀಮಿತ ಮಾಡಿ ಕೊಡಬಹುದಾಗಿತ್ತು. ಏಕೆ ಕೊಡಲಿಲ್ಲ? ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ಎಂಬುದು ಕೇವಲ ಭಾಷಣದ ಸರಕೇ? ಅಹಿಂದ ವರ್ಗದ ಕುರಿತು ನಿಮಗೆ ಬದ್ಧತೆ ಇದೆಯಾ? ಬದ್ಧತೆ ಇದ್ದರೆ ಸಾವಿರಾರು ಕೋಟಿ ರು. ಖರ್ಚು ಮಾಡಿ ಸಿದ್ಧಪಡಿಸಿದ್ದ ಕೆಂಪರಾಜು ವರದಿ ಮತ್ತು ಜಯಪ್ರಕಾಶ್ ಹೆಗ್ಡೆ ವರದಿ ಮೂಲೆಗುಂಪಾಗಿದೆ. ಮಧುಸೂದನ ನಾಯಕ್ ವರದಿ ಹೊರಗೆ ಬರಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಮಹಾ ಮೋಸಗಾರ:ಸಿದ್ದರಾಮಯ್ಯ ಅವರೇ ನಿಮಗೆ ಬದ್ಧತೆ ಇಲ್ಲ. ಜನರಿಗೆ ಮೋಸ ಮಾಡಿ, ಬಡವರನ್ನು ದಾರಿ ತಪ್ಪಿಸಿ, ಅಹಿಂದ ನಾಯಕ ಎಂದು ಹೇಳಿ ಅಧಿಕಾರಕ್ಕೆ ಬರುವುದೊಂದೇ ನಿಮ್ಮ ಗುರಿ. ಕುರ್ಚಿ ಉಳಿಸಿಕೊಳ್ಳಲು ನೀವು ಮಾಡುವುದನ್ನು ನೋಡಿದರೆ ಇದಕ್ಕಿಂತ ಹೆಚ್ಚಿನ ಮೋಸವನ್ನು ಪ್ರಪಂಚದಲ್ಲಿ ಬೇರೆ ಯಾರೂ ಮಾಡಲು ಸಾಧ್ಯ ಇಲ್ಲ. ನೀವು ಮಹಾ ಮೋಸಗಾರ ಎಂದು ಗೋವಿಂದ ಕಾರಜೋಳ ಅವರು ಟೀಕಿಸಿದರು.ನಿಮ್ಮದು ಖಾಜಿ ನ್ಯಾಯ:ಸಿದ್ದರಾಮಯ್ಯ ಅವರ ಸರ್ಕಾರ ಯಾವುದೇ ಆಯೋಗಕ್ಕೆ ನೇಮಿಸಿದರೆ ದಯವಿಟ್ಟು ಒಪ್ಪಿಕೊಳ್ಳಬೇಡಿ. ನಿಮಗೆ ಅವಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಾರೆ. ಮೀಸಲಾತಿ ವಿಷಯದ ಅವರ ನಿರ್ಧಾರವನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸದಾಶಿವ ವರದಿ, ನಾಗಮೋಹನ ದಾಸ್ ವರದಿ, ನಮ್ಮದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಉಪ ಸಮಿತಿ ವರದಿ ಇತ್ತು. ಸುಪ್ರೀಂ ಕೋರ್ಟ್ ಆದೇಶ ಇತ್ತು. ಯಾವುದನ್ನೂ ಪರಿಗಣಿಸದೇ ಖಾಜಿ ನ್ಯಾಯ ಮಾಡಿದ್ದಾರೆ. ಸಿದ್ದರಾಮಯ್ಯ ಕೆಲವರನ್ನು ಸಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಮೂರು ವರ್ಷ ಹಾಗೇ ಬಿಟ್ಟರು:ಸಿದ್ದರಾಮಯ್ಯ ಅವರು 2018ರಲ್ಲಿ ಕಾಂಗ್ರೆಸ್ ಸೋತಾಗ ಒಳ ಮೀಸಲಾತಿ ಕಾರಣಕ್ಕೆ ಎಡಗೈಯವರು ಮತ ಹಾಕಲಿಲ್ಲ ಎಂದು ಸೋನಿಯಾ ಗಾಂಧಿಗೆ ವರದಿ ನೀಡಿದ್ದರು. 2023ರಲ್ಲಿ ಅಧಿಕಾರಕ್ಕೆ ಬಂದರೆ ಮೊದಲನೇ ಅಧಿವೇಶನದಲ್ಲೇ ಒಳ ಮೀಸಲಾತಿ ಜಾರಿ ಬಗ್ಗೆ ಆಶ್ವಾಸನೆ ನೀಡಿದ್ದರು. ಅದನ್ನು ಮಾಡಿಲ್ಲ. ಈಗ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಹಿಂದಿನ ಅಧಿವೇಶನದಲ್ಲಿ 6, 6, 5 ಎಂದು 3 ಕೆಟಗರಿ ಮಾಡಲಾಗಿತ್ತು. ಮಸೂದೆ ಅನುಮೋದಿಸಿ, ರಾಜ್ಯಪಾಲರ ಬಳಿ ಕಾಡಿಬೇಡಿ ನೀವು ಅನುಮೋದನೆ ಪಡೆದು ಬಳಿಕ ಹಾಗೇ ಬಿಟ್ಟರು ಎಂದು ಕಿಡಿಕಾರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.