ರಾಣಿಬೆನ್ನೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದ್ದು, ಕೂಡಲೇ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಮಾದಿಗ ಸಂಘಟನೆ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟಿಸಿ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರದ ಸಂಗಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಎಂ.ಜಿ. ರಸ್ತೆ, ಕುರಬಗೇರಿ ರಸ್ತೆ, ಪಿಬಿ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿವರೆಗೆ ಸಾಗಿ ಬಂದಿತು. ಈ ಸಮಯದಲ್ಲಿ ಸಮಾಜದ ಮುಖಂಡ ಹಾಗೂ ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಮನೆ ಮಾಡಿರುವ ಅಸಮಾನತೆ ಆತಂಕಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ತೆರೆ ಎಳೆದಿದೆ. ರಾಜ್ಯ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಬೇಕು. ಹಿಂದುಳಿದ ಜಾತಿಗಳಿಗೆ ಅನ್ವಯಿಸಿದ ಕೆನೆಪದರ ಮಾನದಂಡಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವ ಮಾನದಂಡಗಳು ಭಿನ್ನವಾಗಿರಬೇಕೆಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಜೊತೆಗೆ ಕೆನೆಪದರ ತಳಕು ಹಾಕಿ ವಿಷಯಾಂತರ ಮಾಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ನೀಲಕಂಠಪ್ಪ ಕುಸಗೂರ, ಪ್ರಕಾಶ ಪೂಜಾರ, ಮೈಲಪ್ಪ ದಾಸಪ್ಪನವರ, ಹೊನ್ನಪ್ಪ ಹೊನ್ನಾಪುರ, ವಿಜಯ ಕೆಳಗಿಮನಿ, ಬಿ.ಡಿ. ಸಾವಕ್ಕಳವರ, ಮಲ್ಲೇಶಪ್ಪ ಮದ್ಲೇರ, ಮಂಜುಳಾ ಮಾದರ, ಪಾರವ್ವ ಹರಿಜನ, ಶೇಖವ್ವ ಚಳಗೇರಿ, ಹೊನ್ನಪ್ಪ ಸಿದ್ದಪ್ಪನವರ, ಶೇಖಪ್ಪ ಕಲ್ಲೇಜರ, ಕೆ.ಆರ್.ಉಮೇಶ, ಶಶಿಧರ ಚಲವಾದಿ, ರಮೇಶ ಐರಣಿ, ಮಲ್ಲೇಶ ಕಜ್ಜರಿ, ಧರ್ಮಣ್ಣ ಅಂತರ ಹಳ್ಳಿ, ಮಂಜಣ್ಣ ಗಂಗಾಪುರ, ದುರ್ಗಪ್ಪ ಹಿಲದಹಳ್ಳಿ, ನೀಲಕಂಠಪ್ಪ ಕರೂರ ಮತ್ತಿತರರಿದ್ದರು.