ಬೀರೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭೇಟಿ: ಸಮಾಜದ ಒಳಿತಿಗಾಗಿ ದುಡಿಯಲು ಸದಾಸಿದ್ದ
ಕನ್ನಡಪ್ರಭ ವಾರ್ತೆ, ಬೀರೂರು.ಮಾದಿಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಕಳೆದ 30ವರ್ಷಗಳಿಂದ ಒಳ ಮೀಸಲಾತಿಗೆ ಹೋರಾಟ ಮಾಡಿದ ಪರಿಣಾಮ ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಶೀಘ್ರದಲ್ಲೇ ನಮ್ಮ ಸಮಾಜಕ್ಕೆ ಒಳಮೀಸಲಾತಿ ಜಾರಿ ಮಾಡಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಭರವಸೆ ವ್ಯಕ್ತಪಡಿಸಿದರು.ಅನ್ಯ ಕಾರ್ಯಕ್ರಮದ ನಿಮಿತ್ತ ಬೀರೂರಿಗೆ ಆಗಮಿಸಿದ ಮಾಜಿ ಸಚಿವ ಎಚ್.ಆಂಜನೇಯ ಪಟ್ಟಣದ ಕಾಂಗ್ರೆಸ್ ಕಾರ್ಯ ಕರ್ತರನ್ನು ಪಕ್ಷ ಬಲಗೊಳಿಸುವಂತೆ ಹುರುಪು ತುಂಬಿ ಪತ್ರಿಕೆಯೊಂದಿಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಲು ರಾಜ್ಯ ಸರ್ಕಾರಕ್ಕೆ ಸಂವಿಧಾನಾತ್ಮಕ ಸಮಸ್ಯೆ ಇತ್ತು. ಆದರೆ ಸುಪ್ರಿಂ ಕೋರ್ಟ ನಮ್ಮ ಪರವಾಗಿ ತೀರ್ಪು ನೀಡಿದ್ದು ಇಡೀ ಸಮುದಾಯಕ್ಕೆ ವರದಾನವಾಗಿದೆ.ಮಾದಿಗ ಸಂಬಂದಿತ ಜಾತಿಗಳ ಸಮನ್ವಯ ಸಭೆಯನ್ನು ಇದೇ ಫೆ.13ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಭೆ ಕರೆಯಲಾಗಿದ್ದು, ಸಮಾಗಾರ, ಚಮ್ಮಾರ, ಮೋಚಿ, ಡೋರ್, ದಕ್ಕಲಿಗ ಮತ್ತಿತರ ಜಾತಿಗಳು ಮಾದಿಗ ಸಂಬಂಧಿತ ಎಡಗುಂಪಿನ ಜಾತಿಗಳಾಗಿವೆ. ಈ ಜಾತಿಗಳಲ್ಲಿ ಸಾಮರಸ್ಯ ಮೂಡಿಸಿ ಒಗ್ಗಟ್ಟಾಗಿ ಪರಿಹಾರ ಹಾಗೂ ಒಳಮೀಸಲಾತಿ ಪಡೆಯುವ ಹಕ್ಕೋತ್ತಾಯ ಮಂಡಿಸಲು ಸಭೆ ಕರೆಯಲಾಗಿದೆ. ಅಧ್ಯಯನ ಮಾಡಿದ ವರದಿಯನ್ನು ತಕ್ಷಣವೇ ಸರ್ಕಾರಕ್ಕೆ ನೀಡಬೇಕು ಎಂದರು.
ಒಳಮೀಸಲಾತಿ ಅನುಷ್ಠಾನಕ್ಕೆ ನಮ್ಮ ರಾಜ್ಯದಲ್ಲೂ ಸಮಸ್ಯೆ ಎದುರಾಗಿತ್ತು. ಅದರಂತೆ ನಮ್ಮ ಮುಖ್ಯಮಂತ್ರಿಗೂ ವಿರೋಧ ಪಕ್ಷಗಳ ಕಾಟದಿಂದ ಮನಸ್ಸಿಗೆ ನೋವಾಗಿದೆ. ಇದರಿಂದ ಹಲವು ತಿಂಗಳು ತಡವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣ ಆಯೋಗ ರಚನೆ ಯಾಗಿ ಎಲ್ಲಾ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಸಂಗ್ರಹಿಸಿ ಮೂಲ ಜನಸಂಖ್ಯೆ ಮತ್ತು ಹಿಂದುಳಿದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸುಪ್ರಿಂಕೋರ್ಟ ಸಹ ಅದನ್ನೆ ಎತ್ತಿ ಹಿಡಿದಿದೆ ಎಂದು ಹೇಳಿದರು.ನಮ್ಮ ದುರಂತ ಏನು ಅಂದರೆ ಮೈಸೂರು, ಚಾಮರಾಜನಗರ, ಬೆಂಗಳೂರು ನಗರ , ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಲ್ಲಿ ಮಾದಿಗ ಸಮಾಜದ ಹೊಲೆಯ ಅಂದರೆ ಎಡಗೈ ಮತ್ತು ಬಲಗೈನ ಜಾತಿಯವರು ಒಂದೇ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಅದನ್ನು ಹೇಗೆ ಬೇರ್ಪಡಿಸುತ್ತೀರಾ ಎಂದು ಕೆಲವರು ಗೊಂದಲ ಸೃಷ್ಠಿ ಸಿ ಇದರ ಬಗ್ಗೆ ಮಾಹಿತಿ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆ ಮಾಡಿದಾಗ 2011 ಸೆನ್ಸಸ್ ಪ್ರಕಾರ ಮನೆಮೆನೆಗೆ ಭೇಟಿ ನೀಡಿ ಈ ಎಲ್ಲಾ ಮಾಹಿತಿ ಪಡೆದಿದ್ದು ಅದನ್ನು ಪರಿಗಣಿಸಿ ಒಳಮೀಸಲಾತಿ ನೀಡಬೇಕೆಂದರು.ಸಾಮಾಜಿಕ ನ್ಯಾಯ ಕಾಪಾಡುವ ನಮ್ಮ ಮುಖ್ಯಮಂತ್ರಿ ಸಿದ್ದರಾಮ್ಯನವರು ಒಳಮೀಸಲಾತಿ ಅನುಷ್ಠಾನಕ್ಕೆ ತರಬೇಕು. ಈಗಾಗಲೇ ತೆಲಂಗಾಣ ರಾಜ್ಯದಲ್ಲಿ ಬರೀ 2ತಿಂಗಳಲ್ಲಿ ಜಾತಿ ಸರ್ವೇ ಮಾಡಿಸಿ ಕ್ರಾಂತಿಕಾರಕ ಅಭಿವೃದ್ಧಿ ಮಾಡಿದ ಅಲ್ಲಿನ ಮುಖ್ಯಮಂತ್ರಿ ರೇವಂತ ರೆಡ್ಡಿ ಅನುಷ್ಠಾನ ಮಾಡಿದ್ದು ಮಾದಿಗ ಸಮುದಾಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ಪಂಜಾಬ್ ಮತ್ತು ಹರಿಯಾಣದಲ್ಲಿ ಒಳಮೀಸಲಾತಿ ಅನುಷ್ಠಾನವಾಗಿದೆ ಎಂದರು.ಕರ್ನಾಟಕ ಮತ್ತು ಆಂದ್ರ ರಾಜ್ಯಗಳಲ್ಲಿ ಒಳಮೀಸಲಾತಿ ಅನುಷ್ಠಾನ ಬಾಕಿ ಇದ್ದು , ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಸಿದ್ದರಾಮಯ್ಯ ಮಾದರಿಯಾಗಲಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಎಸ್ಸಿ ಪಟ್ಟಿಯಿಂದ ಎಕೆ, ಎಡಿ ಹೆಸರು ತೆಗೆದು ಮೂಲ ಜಾತಿ ಹೆಸರಲ್ಲಿ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕೂಡಲೇ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಟಿ.ಚಂದ್ರಶೇಖರ್, ಪ್ರಮೋದ್, ಅಪ್ಪು ನಾಗು, ಕಲ್ಕೆರೆ ಹೇಮಂತ್, ಸೇರಿದಂತೆ ಮತ್ತಿತರ ಕಾಂಗ್ರೆಸ್ ಮುಖಂಡರು ಇದ್ದರು.11 ಬೀರೂರು 2ಬೀರೂರಿಗೆ ಅನ್ಯ ಕಾರ್ಯಕ್ರಮದ ನಿಮಿತ್ತ ಆಗಿಮಿಸದ ಮಾಜಿ ಸಚಿವ ಹೆಚ್.ಆಂಜನೇಯ ಮತ್ತು ಮಾಜಿ ಸಂಸದ ಬಿ.ಎನ್. ಚಂದ್ರಪ್ಪರನ್ನು ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.