ಎಸ್ಸೆಸ್ಸೆಲ್ಸಿ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬೆನ್ನಿಗೆ ಬಿದ್ದ ಶಿಕ್ಷಕರು

KannadaprabhaNewsNetwork | Published : Feb 12, 2025 12:34 AM

ಸಾರಾಂಶ

ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಿಸಿಕೊಳ್ಳಲೇಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಪಣತೊಟ್ಟಂತೆ ಕಂಡು ಬರುತ್ತಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಲು ಬೆನ್ನಿಗೆ ಬಿದ್ದಿದ್ದಾರೆ. ಸತತ ಅಧ್ಯಯನ ನಡೆಸುತ್ತಿದ್ದಾರೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಿಸಿಕೊಳ್ಳಲೇಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಪಣತೊಟ್ಟಂತೆ ಕಂಡು ಬರುತ್ತಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಲು ಬೆನ್ನಿಗೆ ಬಿದ್ದಿದ್ದಾರೆ.

ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲೀಗ ಸತತ ಅಧ್ಯಯನದ ಡ್ರಿಲ್ಲಿಂಗ್ ಶುರುವಾಗಿದೆ. ಪರೀಕ್ಷೆಯ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಓದಿನ ಸಮಯ ಹೆಚ್ಚಳ ಮಾಡಲಾಗುತ್ತಿದ್ದು, ಇಡೀ ದಿನ ವಿದ್ಯಾರ್ಥಿಗಳನ್ನು ಓದು ಮತ್ತು ಬರವಣಿಗೆಯ ಚಟುವಟಿಕೆಯಲ್ಲಿ ತೊಡಗಿಸಲಾಗಿದೆ. ಅಧಿಕಾರಿಗಳ ಒತ್ತಡದಿಂದ ಶಿಕ್ಷಕರು ಇಡೀ ದಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಿಂದೆ ಬಿದ್ದಿದ್ದಾರೆ.

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಕುಸಿತ ಕಂಡಿತ್ತು. ಫಲಿತಾಂಶ ಹೆಚ್ಚಳಕ್ಕೆ ಸಾಕಷ್ಟು ಶ್ರಮಿಸಿದ್ದಾಗ್ಯೂ ಫಲಿತಾಂಶ ಸಮಾಧಾನಕರ ಆಗಿರಲಿಲ್ಲ. ಈ ಬಾರಿ ಫಲಿತಾಂಶದಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆಯಲೇಬೇಕು ಎಂದು ಜಿಪಂ ಸಿಇಒ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಪ್ರೌಢಶಾಲಾ ವಿಷಯವಾರು ಶಿಕ್ಷಕರ ಮೂಲಕ ವಿದ್ಯಾರ್ಥಿಗಳು ಅತಿಹೆಚ್ಚು ಅಂಕ ಪಡೆಯಲು ಹಾಗೂ ಯಾವುದೇ ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳದೇ ಕನಿಷ್ಠ ಅಂಕಗಳನ್ನಾದರೂ ಪಡೆದು ತೇರ್ಗಡೆಯಾಗಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಫಲಿತಾಂಶ ಕುಸಿತ ಶಾಲೆಗಳ ಕಡೆ ನಿಗಾ:

ಫಲಿತಾಂಶ ಹೆಚ್ಚಳಕ್ಕಾಗಿ ತಿಂಗಳಲ್ಲಿ ಎರಡು ಬಾರಿ ಕಿರು ಪರೀಕ್ಷೆ ನಡೆಸುವುದು, ಕಿರು ಪರೀಕ್ಷೆಯಲ್ಲಿ ಫಲಿತಾಂಶದಲ್ಲಿ ಹೆಚ್ಚು ಅಂಕ ಪಡೆಯದ ಮಕ್ಕಳ ಕಡೆ ನಿಗಾ ಇರಿಸುವುದು, ಕಿರು ಪರೀಕ್ಷೆಯಲ್ಲಿ ಶೇ.40ರಷ್ಟು ಅಂಕ ಪಡೆದ ಶಾಲೆಗಳತ್ತ ಗಮನ ನೀಡುವುದು, ಸಂಜೆ ಶಾಲೆ ಬಿಟ್ಟ ಬಳಿಕ ಒಂದಷ್ಟು ಹೊತ್ತು ವಿಶ್ರಾಂತಿ ನೀಡಿ ಬಳಿಕ ರಾತ್ರಿವರೆಗೆ ನಿರಂತರ ಓದು ಹಾಗೂ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸುವುದು, ಕಲಿಕಾ ಪ್ರಗತಿ ಸಾಧಿಸಿರುವ ವಿದ್ಯಾರ್ಥಿ ಜೊತೆ ನಿಧಾನಗತಿ ಕಲಿಕೆಯ ಲಕ್ಷಣವುಳ್ಳ ವಿದ್ಯಾರ್ಥಿಯ ಜೊತೆಗೂಡಿಸಿ ಅಧ್ಯಯನದಲ್ಲಿ ತೊಡಗಿಸುವುದು, ಮಾದರಿ ಪ್ರಶ್ನೆಗಳನ್ನು ಸತತವಾಗಿ ಬಿಡಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, 15 ದಿನಕ್ಕೊಮ್ಮೆ ಪೋಷಕರನ್ನು ಕರೆಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ತಿಳಿಸಿಕೊಡುವುದಲ್ಲದೆ, ಪೋಷಕರ ಜವಾಬ್ದಾರಿಯನ್ನು ತಿಳಿಸಿಕೊಡುವುದು ಹೀಗೆ ಫಲಿತಾಂಶ ಏರಿಕೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಬೆನ್ನುಬಿದ್ದಿದ್ದಾರೆ.

ಫಲಿತಾಂಶ ಕುಸಿದರೆ ಕ್ರಮದ ಎಚ್ಚರಿಕೆ:

ಕಳೆದ ವರ್ಷ ಅತ್ಯಂತ ಕಡಿಮೆ ಅಂಕ ಗಳಿಸಿದ ಶಾಲೆಗಳ ಮುಖ್ಯಗುರುಗಳಿಗೆ ನೊಟೀಸ್ ನೀಡಲಾಗಿತ್ತು. ಫಲಿತಾಂಶ ಇಳಿಮುಖವಾಗಲು ಕಾರಣಗಳನ್ನು ಕೇಳಲಾಗಿತ್ತು. ಇಲಾಖೆಯ ಮೂಲಗಳ ಪ್ರಕಾರ ಈ ಬಾರಿ ಮತ್ತಷ್ಟು ಕಠಿಣ ಕ್ರಮದ ಎಚ್ಚರಿಕೆಯನ್ನು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ರವಾನಿಸಿದ್ದಾರೆ. ಆಯಾ ಪ್ರೌಢಶಾಲೆಗಳ ಮುಖ್ಯಗುರುಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ಬೇಕಾದ ಪೂರಕ ಕ್ರಮಗಳನ್ನು ಬಿಡುವಿಲ್ಲದೆ ತೊಡಗಿಸಿಕೊಳ್ಳಬೇಕು. ಪರೀಕ್ಷೆ ಮುಗಿಯುವವರೆಗೆ ರಜೆ ಮಾಡದೇ ಫಲಿತಾಂಶದ ಕಡೆ ಗಮನ ನೀಡಬೇಕು ಎಂದು ಸೂಚಿಸಿದ್ದಾರೆ. ಬಹುತೇಕ ಪ್ರೌಢಶಾಲೆಗಳಲ್ಲೀಗ ಪರೀಕ್ಷಾ ಪೂರ್ವದ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

21,553 ವಿದ್ಯಾರ್ಥಿಗಳು ಪರೀಕ್ಷೆಗೆ ಅಣಿ: ಬಳ್ಳಾರಿ ಜಿಲ್ಲೆಯ ಐದು ಶೈಕ್ಷಣಿಕ ತಾಲೂಕುಗಳಲ್ಲಿ 149 ಸರ್ಕಾರಿ ಪ್ರೌಢಶಾಲೆಗಳು, 34 ಅನುದಾನಿತ, 137 ಖಾಸಗಿ ಶಾಲೆಗಳು ಸೇರಿದಂತೆ 320 ಪ್ರೌಢಶಾಲೆಗಳಿವೆ. 21,553 ವಿದ್ಯಾರ್ಥಿಗಳು (ಫ್ರೆಷರ್ಸ್) ಪರೀಕ್ಷೆಗೆ ನೋಂದಣಿಯಾಗಿದ್ದಾರೆ.

ಟಾಪ್‌ 10ರಲ್ಲಿ ಬರುವ ವಿಶ್ವಾಸ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಜಿಲ್ಲಾಡಳಿತ ಹಾಗೂ ಜಿ.ಪಂ. ಸಿಇಒ ಅವರು ಹೆಚ್ಚು ಆಸ್ಥೆ ವಹಿಸಿ ಮಕ್ಕಳ ಫಲಿತಾಂಶ ಏರಿಕೆಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ಈ ಬಾರಿ ಬಳ್ಳಾರಿ ಟಾಪ್ 10ರಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಬಳ್ಳಾರಿ ಡಿಡಿಪಿಐ ಉಮಾದೇವಿ ಹೇಳಿದರು.

Share this article