ಸವಣೂರು: ಮಾದಿಗ ಸಮಾಜದ ಒಳಮೀಸಲಾತಿ ಸಮೀಕ್ಷೆ ಕುರಿತು ತಾಲೂಕು ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಮಾದಿಗ ಸಮಾಜದ ಪ್ರಮುಖರು ಗುರುವಾರ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಅವರಿಗೆ ಮನವಿ ಸಲ್ಲಿಸಿದರು.ಒಳಮಿಸಲಾತಿ ಹಂಚಿಕೆಗಾಗಿ ಸರ್ಕಾರ ಕೈಗೊಂಡಿರುವ ಪರಿಶಿಷ್ಟ ಜಾತಿಯ ಜನಗಣತಿಯಲ್ಲಿ ತಾಲೂಕು ಮಟ್ಟದಲ್ಲಿರುವ ಮಾದಿಗ ಸಮಾಜದ ಸಮುದಾಯವನ್ನು ಬೇರೆ ಬೇರೆ ಜಾತಿಯ ಸಮುದಾಯ ಅಡಿಯಲ್ಲಿ ಗುರುತಿಸಲಾಗುತ್ತಿದೆ. ಸಮಸ್ಯೆಯನ್ನು ಬಗೆಹರಿಸಲು ಎ.ಜೆ. ಸದಾಶಿವ ಆಯೋಗದ ವರದಿಯಲ್ಲಿನ ಅಂಕಿಅಂಶಗಳನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಂಡು ಬಳಸಬಹುದಿತ್ತು. ಆದರೆ, ಸರ್ಕಾರ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರ ಆಯೋಗದ ಶಿಫಾರಸ್ಸನ್ನು ಒಪ್ಪಿದೆ.
ಜಾತಿಯಲ್ಲಿ ಉಪಜಾತಿಯನ್ನು ನಮೂದಿಸುವ ಬಗ್ಗೆ ಪರಿಶಿಷ್ಟ ಜಾತಿಯ ಸಮಾಜದವರಿಗೆ ಬಹಳಷ್ಟು ಗೊಂದಲ ಮೂಡಿಸಿದೆ. ಈ ಕುರಿತು ಸವಣೂರು ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಒಳಮಿಸಲಾತಿ ಸಮೀಕ್ಷೆ ಕುರಿತು ಸ್ಪಷ್ಟವಾಗಿ ಧ್ವನಿವರ್ದಕ, ಡಂಗೂರ ಸಾರುವ ಮೂಲಕ ಮತ್ತು ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವ ಮೂಲಕ ಮಾದಿಗ ಸಮಾಜದವರಿಗೆ ಅರಿವು ಮೂಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪ್ರಮುಖರಾದ ಲಕ್ಷ್ಮಣ ಕನವಳ್ಳಿ, ಶಿವಾನಂದ ಹುಲ್ಲಮ್ಮನವರ, ಶ್ರೀಕಾಂತ ಲಕ್ಷ್ಮೇಶ್ವರ, ಬಸವರಾಜ ಮೈಲಮ್ಮನವರ, ಆನಂದ ವಡಕಮ್ಮನವರ, ಪುಟ್ಟಪ್ಪ ಕ್ಯಾಡದ, ಪ್ರವೀಣ ಬಾಲೇಹೊಸೂರ, ನಾಗರಾಜ ಹರಿಜನ, ಗಂಗಪ್ಪ ಹರಿಜನ, ಪ್ರಶಾಂತ ಮುಗಳಿ, ಮನೋಜ ದೊಡ್ಡಮನಿ, ಅಪ್ಪಣ್ಣ ತೊಂಡೂರ, ಸುನೀಲ ಹರಿಜನ, ರಘು ಬಾಲೇಹೊಸೂರ, ಸತೀಶ ಮೈಲಮ್ಮನರ, ಮುತ್ತು ಲಕ್ಷ್ಮೇಶ್ವರ, ಉಮೇಶ ದೊಡ್ಡಮನಿ, ಮನೋಜ ಕನವಳ್ಳಿ, ಮಂಜು ಮೈಲಮ್ಮನವರ, ಲಕ್ಷ್ಮಣ ಮುಗಳಿ ಹಾಗೂ ಇತರರು ಇದ್ದರು. ಜಿಲ್ಲೆಯ ವಿವಿಧೆಡೆ ಮಳೆಹಾವೇರಿ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು, ಮಿಂಚು ಗಾಳಿ ಸಮೇತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆ ವೇಳೆಗೆ ಏಕಾಏಕಿ ಮೋಡ ಕವಿದು ಗಾಳಿ ಸಮೇತ ಅರ್ಧ ಗಂಟೆಗೂ ಹೆಚ್ಚುಕಾಲ ಮಳೆಯಾಗಿದೆ. ಹಾವೇರಿ ನಗರ, ಅಗಡಿ, ಗುತ್ತಲ, ಹಾನಗಲ್ಲ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ಮಳೆಗಿಂತ ಗಾಳಿ, ಗುಡುಗಿನ ಆರ್ಭಟ ಜೋರಾಗಿತ್ತು. ಇದರಿಂದ ವಿದ್ಯುತ್ ವ್ಯತ್ಯಯವಾಯಿತು.ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗಿ, ಜಿಲ್ಲೆಯ ಜನರು ಸೆಕೆಗೆ ಬೇಸತ್ತು ಹೋಗಿದ್ದರು. ಸಂಜೆ ಅಲ್ಲಲ್ಲಿ ಗುಡುಗಿನೊಂದಿಗೆ ಮಳೆ ಸುರಿದಿದೆ. ಗುರುವಾರ ಕೂಡ ಬ್ಯಾಡಗಿ ಸೇರಿದಂತೆ ವಿವಿಧೆಡೆ ಮಳೆಯಾಗಿತ್ತು. ಮುಂಗಾರು ಪೂರ್ವ ಆಗುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಭತ್ತ, ಸೂರ್ಯಕಾಂತಿ ರಕ್ಷಿಸಿಕೊಳ್ಳಲು, ಮೇವಿನ ಬಣವಿಗಳನ್ನು ಮುಚ್ಚಲು ರೈತರು ಪರದಾಡುವಂತಾಗಿದೆ.