-ಕಡೂರು ವೀರಭದ್ರೇಶ್ವರ ದೇವಾಲಯ ಪ್ರಾಂಗಣದಲ್ಲಿ ನಡೆದ ಶ್ರಾವಣ ಸರಣಿಯಲ್ಲಿ ಬಸವಪ್ರಭು ಸ್ವಾಮೀಜಿ
ಕನ್ನಡಪ್ರಭವಾರ್ತೆ ಹೊಳಲ್ಕೆರೆ
ಅಂತರಂಗ ಮತ್ತು ಬಹಿರಂಗ ಎರಡು ಶುದ್ಧವಾಗಿರಬೇಕು. ಬಹಿರಂಗ ಶುದ್ಧಿಗೆ ಎಲ್ಲರೂ ಆದ್ಯತೆ ನೀಡುತ್ತಾರೆ. ಆದರೆ, ಅಂತರಂಗ ನಿರ್ಮಲವಾಗಿರಬೇಕಾದರೆ ದಾರ್ಶನಿಕರ ತತ್ವಾದರ್ಶಗಳ ಶ್ರವಣ ಮತ್ತು ಮನನ, ಮತ್ತವುಗಳ ಅನುಸರಣೆಯಿಂದ ಸಾಧ್ಯವಿದೆಯೆಂದು ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.ಮುರುಘರಾಜೇಂದ್ರ ಬೃಹನ್ಮಠದಿಂದ ತಾಲೂಕಿನ ಕಡೂರು ವೀರಭದ್ರಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಆಯೋಜಿಸಿದ್ದ ಚಿಂತನ ಶ್ರಾವಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುರುಘಾಮಠದ ಹಳ್ಳಿ ಹಳ್ಳಿಗೆ ಸಂಚರಿಸಿ ಅನುಭಾವ ಶ್ರಾವಣ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುತ್ತಿದೆ. ಬಸವತತ್ವದ ಜಾಗೃತಿ ಶಿವಾನುಭವ ಸಂದೇಶವಾಗಿದೆ. ಬಸವಾದಿ ಶರಣರ ವಚನಗಳ ಆಲಿಸುವುದು, ಓದುವುದು, ಮುರುಘಾ ಪರಂಪರೆಯ ಶ್ರೀಗಳವರ ಜೀವನ, ಆದರ್ಶ ಕಾರ್ಯಗಳನ್ನು ಅಧ್ಯಯನ ಮಾಡುವುದು, ಮುಂತಾದವುಗಳಿಂದ ಅಂತರಂಗ ಶುದ್ಧಿ ಮಾಡಿಕೊಳ್ಳ ಬೇಕೆಂದರು.
ಮುರುಘಾಮಠದ ಮೂರು ಸಾವಿರ ಸಣ್ಣ ಗುರುಪಾದ ಸ್ವಾಮಿಗಳು ಸ್ವತಃ ಕವಿಗಳಾಗಿದ್ದರು. ಹೈದರಾಲಿ ಎಂಬ ನಾಯಕ ಮುರುಘಾ ಮಠದ ಸಂಪತ್ತನ್ನು ದೋಚಲು ಬರುವಾಗ ತಲೆ ಸುತ್ತು ಬಂದು ಬಿದ್ದನಂತೆ. ಆ ವೇಳೆಯಲ್ಲಿ ಮೂರು ಸಾವಿರ ಗುರುಪಾದ ಸ್ವಾಮಿಗಳು ಧ್ಯಾನಸಕ್ತರಾಗಿದ್ದರಂತೆ. ಆನಂತರ ದಿನಗಳಲ್ಲಿ ಗುರುಪಾದ ಸ್ವಾಮಿಗಳು ಲೋಕ ಸಂಚಾರ ಹೊರಟರೆಂದು ಚರಿತ್ರೆಯಲ್ಲಿ ಬರುತ್ತದೆ. ಸಾಮಾಜಿಕ ಧಾರ್ಮಿಕ ಕಾರ್ಯಗಳನ್ನು ಮಾಡಿದ ಐತಿಹ್ಯಗಳು ನಮಗೆ ದಾಖಲೆಗಳಲ್ಲಿ ಸಿಗುತ್ತದೆ. ಮೊಟ್ಟ ಮೊದಲ ಪ್ರಸಾದ ನಿಲಯ ಆರಂಭಿಸಿದ್ದ ಕೀರ್ತಿ ಬೃಹನ್ಮಠಕ್ಕೆ ಸಲ್ಲುತ್ತದೆ. ಅವರು ಸ್ಥಾಪಿಸಿದ ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ಓದಿದ ಬಹುತೇಕರು ಆದರ್ಶ ಜೀವನವನ್ನು ರೂಪಿಸಿಕೊಂಡು ಉನ್ನತ ಪದವಿ, ಅಧಿಕಾರ ಹಿಡಿದಿದ್ದನ್ನು ನಾವು ಕಾಣಬಹುದಾಗಿದೆ ಎಂದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಸಂಗೀತ ಹಾಗೂ ಪ್ರಾರ್ಥನೆಯನ್ನು ನಿರ್ವಹಿಸಿದರು. ದೇವಾಲಯ ಕಾರ್ಯನಿರ್ವಾಹಕ ಸಮಿತಿಯ ಉಪಾಧ್ಯಕ್ಷ ಎಚ್.ಎಂ.ದಯಾನಂದ್ ಸ್ವಾಗತ ಕೋರಿದರು. ಉಪನ್ಯಾಸಕ ಕೆ.ಎಚ್ ಸಿದ್ದಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ನಿಸಾರ್ ಅಹಮದ್ ಶರಣು ಸಮರ್ಪಣೆ ಮಾಡಿದರು.
ಪೋಟೋ......
------