ಅತಿವೃಷ್ಟಿಗೆ ಬೆಳೆ ನಷ್ಟ: ಕಾಫಿ ಮಂಡಳಿ ಜಂಟಿ ನಿರ್ದೇಶಕರ ಪರಿಶೀಲನೆ

KannadaprabhaNewsNetwork |  
Published : Aug 29, 2024, 12:48 AM IST
ಬೆಂಗಳೂರಿನ ಕಾಫಿ ಮಂಡಳಿ ಜಂಟಿ ನಿರ್ದೇಶಕ ಪಾರ್ಥ ಪ್ರಧಾನ್ ಚೌಧರಿ ಅವರು ಅತಿವೃಷ್ಟಿ ಬೆಳೆಹಾನಿ ಹಿನ್ನಲೆ ದಕ್ಷಿಣ ಕೊಡಗಿನ ಕಾಫಿ ತೋಟಗಳಿಗೆ ಬುಧುವಾರ ಭೇಟಿ ನೀಡಿದರು | Kannada Prabha

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಕಾಫಿ ಬೆಳೆ ನಷ್ಟದ ಹಿನ್ನೆಲೆ ಬೆಂಗಳೂರು ಭಾರತೀಯ ಕಾಫಿ ಮಂಡಳಿ ಜಂಟಿ ನಿರ್ದೇಶಕ ಪಾರ್ಥ ಪ್ರಧಾನ್ ಚೌಧರಿ ದಕ್ಷಿಣ ಕೊಡಗಿನ ತೋಟಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಕಾಫಿ ಬೆಳೆ ನಷ್ಟದ ಹಿನ್ನೆಲೆ ಬೆಂಗಳೂರು ಭಾರತೀಯ ಕಾಫಿ ಮಂಡಳಿ ಜಂಟಿ ನಿರ್ದೇಶಕ ಪಾರ್ಥ ಪ್ರಧಾನ್ ಚೌಧರಿ ದಕ್ಷಿಣ ಕೊಡಗಿನ ತೋಟಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅವರು ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಕೋಣಗೇರಿ, ಬಿರುನಾಣಿ ಗ್ರಾ. ಪಂ. ವ್ಯಾಪ್ತಿಯ ಪೊರಾಡು ಗ್ರಾಮಗಳ ತೋಟಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಸ್ಥಳೀಯ ಬೆಳೆಗಾರರು ಪ್ರಸಕ್ತ ವರ್ಷ ಬಿರುಗಾಳಿ ಸಹಿತ ಅತಿವೃಷ್ಟಿಗೆ ಕಾಫಿ ಬೆಳೆ, ಕೊಳೆ ರೋಗ ಹಾಗೂ ತೊಟ್ಟು ಕೊಳೆಯುವ ರೋಗದಿಂದ ಪೀಡಿತವಾಗಿ ಶೇ. 70 ಫಸಲು ನಷ್ಟವಾಗಿದೆ. ಇನ್ನೂ ಸಹ ಮಳೆ ಮುಂದುವರಿದಿದ್ದು ನಷ್ಟ ಪ್ರಮಾಣ ಹೆಚ್ಚಾಗಲಿದೆ. ಕಾಫಿ ಮಂಡಳಿ ಕೊಳೆರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡನೆಗೆ ಸಲಹೆ ನೀಡಿದ್ದರೂ , ಔಷಧಿ ದುಬಾರಿಯಾಗಿದ್ದು ಮಳೆ ಬಿಡುವು ನೀಡದೆ ಈ ಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.

ಕಾರ್ಮಿಕರ ಕೊರತೆ, ರಸಗೊಬ್ಬರ ದರ ಏರಿಕೆ, ಫಸಲು ಕುಂಠಿತದಿಂದ ತೋಟ ನಿರ್ವಹಣೆ ದೊಡ್ಡ ಸವಾಲಾಗಿದೆ, ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೆಚ್ಚಿನ ಮಟ್ಟದ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲು ಬೆಳೆಗಾರರು ಮನವಿ ಮಾಡಿದರು.

ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಕಾಫಿಗೆ ಎನ್.ಡಿ.ಆರ್.ಎಫ್. ಪರಿಹಾರ ಮೊತ್ತ ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ ಪ್ರತಿ ಎಕರೆಗೆ 1 ಲಕ್ಷ ಪರಿಹಾರ ನೀಡಬೇಕೆಂದು ಬೆಳೆಗಾರರು ಮನವಿ ಮಾಡಿದರು.

ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಏರಿಕೆಯಾಗಿದ್ದಾರೂ ಅದಕ್ಕೆ ಅನುಸಾರ ದರ ಬೆಳೆಗಾರರಿಗೆ ಸಿಗುತ್ತಿಲ್ಲ. ಸಣ್ಣ ಬೆಳೆಗಾರರು ಬ್ಯಾಂಕ್ ಸಾಲ ಪಾವತಿ, ತೋಟ ನಿರ್ವಹಣೆ ವೆಚ್ಚ ಭರಿಸಬೇಕಾದ ಹಿನ್ನಲೆ ಮಾರುಕಟ್ಟೆ ಬರುವವರೆಗೆ ದಾಸ್ತಾನು ಇಟ್ಟುಕೊಳ್ಳಲು ಸಾಧ್ಯವಾಗದೆ ಮಾರ್ಚ್ ತಿಂಗಳಲ್ಲಿಯೇ ಮಾರಾಟಮಾಡುತ್ತಾರೆ. ಇತ್ತೀಚಿಗೆ ಮಾರುಕಟ್ಟೆ ದರ ಏರಿಕೆಯಾಗಿದ್ದರೂ ಅದು ಸಣ್ಣ ಬೆಳೆಗಾರರಿಗೆ ದಕ್ಕುತ್ತಿಲ್ಲ ಎಂದು ಬೆಳೆಗಾರರು ವಿವರಿಸಿದರು.

ರಸಗೊಬ್ಬರ, ಕೊಳೆ ರೋಗದ ಔಷಧಿಗಳನ್ನು ಸಬ್ಸಿಡಿಯಡಿ ಕಾಫಿ ಬೆಳೆಗಾರರಿಗೆ ನೀಡಬೇಕು, ಕಾಫಿ ಬೆಳೆನಷ್ಟಕ್ಕೆ ವಿಮೆ ಸೌಲಭ್ಯ ವ್ಯಾಪ್ತಿಗೆ ತರಬೇಕೆಂದು ಮನವಿ ಮಾಡಿದರು.

ಬೆಳೆಗಾರರ ಅಹವಾಲು ಹಾಗೂ ವಸ್ತು ಸ್ಥಿತಿ ಬಗ್ಗೆ ಕಾಫಿ ಮಂಡಳಿಯ ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಜಂಟಿ ನಿರ್ದೇಶಕರು ಭರವಸೆ ನೀಡಿದರು.

ಸ್ಥಳೀಯ ಬೆಳೆಗಾರರೊಂದಿಗೆ ಭಾರತೀಯ ಕಾಫಿ ಮಂಡಳಿಯ ಗೋಣಿಕೊಪ್ಪ ವಿಭಾಗದ ಹಿರಿಯ ಸಂಪರ್ಕ ಅಧಿಕಾರಿ ಶ್ರೀರಮಣ ಹಾಗೂ ಶ್ರೀಮಂಗಲ ಕಿರಿಯ ಸಂಪರ್ಕ ಅಧಿಕಾರಿ ಸುನಿಲ್ ಕುಮಾರ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!