ಕಾರ್ಕಳ: ಕಾರ್ಕಳ ಕಾಂಗ್ರೆಸ್ ನಾಯಕ ಹಾಗೂ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರು ಗುರುವಾರ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ 19ರಿಂದ 21ರವರೆಗೆ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲದ ಸಿದ್ಧತೆಗಳನ್ನು ವೀಕ್ಷಿಸಿದರು.
ಯುವಸಮುದಾಯವನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ವಿಶೇಷ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶವಾದ ಮುನಿಯಾಲಿನಲ್ಲಿ ಸಂಜೀವಿನಿ ಗೋಧಾಮವನ್ನು ಕೃಷಿ ಸಂಶೋಧನಾ ಕೇಂದ್ರದ ಮಾದರಿಯಲ್ಲಿ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ಹೇಳಿದರು. ಕೈಗಾರಿಕೋದ್ಯಮಿಯೊಬ್ಬರು ಕೃಷಿಗೆ ಆದ್ಯತೆ ನೀಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಗೋಧಾಮದ ಮೂಲಕ ಮುನಿಯಾಲಿನ ಹೆಸರು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.ರೈತರು ಹಾಗೂ ಯುವಜನರನ್ನು ಕೃಷಿಯತ್ತ ಮರಳಿ ಕರೆದು ಆತ್ಮನಿರ್ಭರ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸುವ ಮಹಾಸಂಕಲ್ಪದೊಂದಿಗೆ ಈ ಪಾರಂಪರಿಕ ಶ್ರೀಮನ್ನಾಗಮಂಡಲವನ್ನು ಆಯೋಜಿಸಲಾಗಿದೆ. “ಸರ್ವರೂ ಕೈಜೋಡಿಸಿ ಶ್ರೀಮನ್ನಾಗಮಂಡಲವನ್ನು ಯಶಸ್ವಿಗೊಳಿಸೋಣ,” ಎಂದು ಉದಯ ಕುಮಾರ್ ಶೆಟ್ಟಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮುನಿಯಾಲು ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ಸವಿತಾ ರಾಮಕೃಷ್ಣ ಆಚಾರ್, ನಮಿತಾ ಉದಯ ಕುಮಾರ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ (ಕಾರ್ಕಳ), ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಯಾಲು ಗೋಪಿನಾಥ ಭಟ್, ಪಡುಕುಡೂರು ಪ್ರಸನ್ನ ಶೆಟ್ಟಿ, ಭಾರವಿ ಶೆಟ್ಟಿ, ಕಡ್ತಲ ಸುನೀಲ್ ಹೆಗ್ಡೆ, ಕುಕ್ಕುಜೆ ಸಂಪತ್ ಪೂಜಾರಿ, ಎಳ್ಳಾರೆ ನಾರಾಯಣ ಆಚಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.