ಸೆ.13ಕ್ಕೆ ಬೆಳ್ಳಿತೆರೆಯ ಮೇಲೆ ‘ವಿಕಾಸಪರ್ವ’: ನಿರ್ದೇಶಕ ಅನ್ಬು ಅರಸ್

KannadaprabhaNewsNetwork | Published : Aug 29, 2024 12:48 AM

ಸಾರಾಂಶ

ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಚಿತ್ರ ವಿಕಾಸಪರ್ವ ಸೆ.13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಅನ್ಬು ಅರಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಮಾಜಿಕ ಜವಬ್ದಾರಿಯನ್ನು ನೆನಪಿಸುವ ಚಿತ್ರ ವಿಕಾಸಪರ್ವ ಸೆ.13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಅನ್ಬು ಅರಸ್ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿಕಾಸ ಪರ್ವದ ಮೂಲಕ ಒಂದು ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುವ ಪ್ರಯತ್ನವನ್ನು ಮಾಡ ಲಾಗಿದೆ. ಚಿತ್ರವು ಕುತೂಹಲದೊಂದಿಗೆ ಸಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಒಂದು ಗಹನವಾದ ಸಮಸ್ಯೆ ಇದ್ದೇ ಇರುತ್ತದೆ. ಅದರಿಂದ ಹೊರಬರಲು ವಿವೇಚನೆ ಅಗತ್ಯ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದರು.ಹಲವು ಧಾರಾವಾಹಿಗಳ ಮೂಲಕ ಗಮನ ಸೆಳೆದಿರುವ ಯುವ ನಟ ರೋಹಿತ್ ನಾಗೇಶ್ ನಾಯಕನಾಗಿ ಮತ್ತು ಧಾರಾವಾಹಿಗಳಲ್ಲಿ ವಿಲನ್ ಪಾತ್ರಕ್ಕೆ ಹೆಸರಾದ ಸ್ವಾತಿ ನಾಯಕಿಯಾಗಿ ನಟಿಸಿದ್ದಾರೆ. ವಿಶೃತ್ ನಾಯಕ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಮೂರು ಸುಂದರವಾದ ಹಾಡುಗಳಿವೆ. ಎಒಪಿ ಎಂಬುವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ನವೀನ್ ಸುವರ್ಣ ಛಾಯಾಗ್ರಹಣವಿದ್ದು, ತಾರಾಗಣದಲ್ಲಿ ಅಶ್ವಿನ್ ಹಾಸನ್, ನಿಶಿತಾ ಗೌಡ, ಬಲರಾಜವಾಡಿ, ಕುರಿ ರಂಗ ಮುಂತಾದವರಿದ್ದಾರೆ ಎಂದು ತಿಳಿಸಿದರು.ಮಧ್ಯಮ ವಯಸ್ಕರ ಸುತ್ತ ನಡೆಯುವ ಒಂದು ಸಾಂಸರಿಕ ಕತೆಯನ್ನು ಈ ಚಿತ್ರ ಹೊಂದಿದೆ. ಇಡೀ ಕುಟುಂಬ ಒಟ್ಟಾಗಿ ನೋಡವ ಸಿನಿಮಾ ಇದಾಗಿದೆ. ಚಿಕ್ಕಮಗಳೂರು, ಸಕಲೇಶಪುರ, ಕೊಡಗು ಸೇರಿದಂತೆ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಕತೆಗೆ ತಕ್ಕಂತೆ ಹೊಡೆದಾಟದ ದೃಶ್ಯಗಳೂ ಇವೆ. ಈಗಾಗಲೇ ಚಿತ್ರದ ಟ್ರೈಲರ್, ಮತ್ತು ಒಂದು ಹಾಡು ಬಿಡುಗಡೆಯಾಗಿ ಅತ್ಯಂತ ಜನಪ್ರಿಯಗೊಂಡಿವೆ ಎಂದು ಹೇಳಿದರು.ನಟ ರೋಹಿತ್ ನಾಗೇಶ್ ಮಾತನಾಡಿ, ನಾನು ಸುಮಾರು 22 ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಈಗಾಗಲೇ 65 ಧಾರಾವಾಹಿ ಮತ್ತು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ, ನಾಯಕ ನಟನಾಗಿ ಇದೇ ಮೊದಲ ಬಾರಿಗೆ ಅಭಿನಯಿಸಿದ್ದೇನೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ನನ್ನದು. ಕನ್ನಡಿಗರು ನಮಗೆ ಪ್ರೋತ್ಸಾಹ ನೀಡಬೇಕು ಎಂದರು.ನಟಿ ಸ್ವಾತಿ ಮಾತನಾಡಿ, ಅನೇಕ ಧಾರಾವಾಹಿಗಳಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ಗುರುತಿಸಿಕೊಂಡಿದ್ದೆ. ಆದರೆ, ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ. ಇದು ನಿಜಕ್ಕೂ ಒಂದು ಉತ್ತಮ ಪಾತ್ರವಾಗಿದೆ. ಅದರಲ್ಲೂ ಹಾಡುಗಳು ನನಗಾಗಿ ರಚಿಸಿವೆ ಎಂಬಂತಿದೆ. ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದರು.ವಿಶೃತ್ ನಾಯಕ್ ಮಾತನಾಡಿ, ಈ ಚಿತ್ರದ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದ್ದೇವೆ. ಒಂದು ಕೌತುಕವಂತೂ ಇದ್ದೇ ಇದೆ. ನಿರ್ಮಾಪಕ ಸಮೀರ್ ನಮಗೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಕನ್ನಡಿಗರು ನಮ್ಮನ್ನು ಹರಸುತ್ತಾರೆ ಎಂಬ ನಂಬಿಕೆ ಇದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸತ್ಯಮೂರ್ತಿ ಇದ್ದರು.

------

Share this article