ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಜೇನು ಹುಳುಗಳು ಸಂರಕ್ಷಣೆ ಪರಿಸರ ಸಮತೋಲನಕ್ಕೆ ಅಗತ್ಯವಾಗಿದ್ದು ಇದರಿಂದ ಜೈವ ವೈವಿಧ್ಯ ಸಂರಕ್ಷಣೆ ಆಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್ ಎನ್ ಕೆಂಚರೆಡ್ಡಿ ತಿಳಿಸಿದರು.ಸುಂಟಿಕೊಪ್ಪ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ರೈನ್‌ಫಾರೆಸ್ಟ್ ಹಾಗು ಬೈಫ್ ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಸುಂಟಿಕೊಪ್ಪ ಹಾಗೂ ದಕ್ಷಿಣ ಕೊಡಗಿನ ತಿತಿಮತಿ ಭಾಗದ ಕೃಷಿಕರಿಗೆ ಆಯೋಜಿಸಲಾಗಿದ್ದ ರೈತರಿಗೆ ಸಮಗ್ರ ಹಾಗೂ ಪ್ರಾಯೋಗಿಕ ಮಾಹಿತಿಯನ್ನು ನೀಡುವ ಕಾರ್ಯಾಗಾರದಲ್ಲಿ ವಿಚಾರ ವಿನಿಮಯದಲ್ಲಿ ಮಾತನಾಡಿದರು.

ಜೇನು ಹುಳುಗಳು ಕೇವಲ ಉತ್ಪಾದನೆಗೆ ಮಾತ್ರವಲ್ಲ ಪರಾಗ ಸಂಚಯ ಹೆಚ್ಚಿಸಿ ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಜೇನುಗಾರಿಕೆಯ ಮಹತ್ವ, ಜೇನು ಕುಟುಕುಗಳ ಸಂರಕ್ಷಣೆ, ಜೇನು ಉತ್ಪಾದನೆಯ ತಂತ್ರಜ್ಞಾನ ಮತ್ತು ಮಾರುಕಟ್ಟೆ ಸಾಧ್ಯತೆಗಳ ಬಗ್ಗೆ ಮಾಹಿತಿಯನ್ನು ನೀಡಿ ಕೃಷಿ ಅರಣ್ಯದಿಂದ ಕಾಫಿ, ಮೆಣಸು, ಹಣ್ಣು, ಗಿಡಗಳು ಹಾಗೂ ಅರಣ್ಯ ಮರಗಳ ಸಂಯೋಜಿತ ಕೃಷಿ ಮೂಲಕ ರೈತರಿಗೆ ದೀರ್ಘಕಾಲಿಕ ಆದಾಯವನ್ನು ಗಳಿಸಬಹುದು ಎಂದು ತಿಳಿಸಿದರು.ಕಾಫಿ ಬೆಳೆ ನಿರ್ವಹಣೆ ಮತ್ತು ಉತ್ಪಾದಕತೆ ಕುರಿತು ಮಾಹಿತಿ ನೀಡಿದ ಕಾಫಿ ಬೋರ್ಡ್ ಸಂಸ್ಥೆ ಡಾ. ಮುಕಾರರಿಬ್ ಕಾಫಿ ಬೆರ್ರಿ ಬೋರರ್ ನಿಯಂತ್ರಣ ಹಾಗೂ ಎಲೆಗಳಿಗೆ ಭಾದಿಸುವ ಕಾಯಿಲೆಗಳಿಂದ ಸಂರಕ್ಷಿಸುವ ಸಲುವಾಗಿ ಸಸ್ಯ ಸಂರಕ್ಷಣೆ ಕ್ರಮಗಳ ಸಲಹೆಗಳನ್ನು ನೀಡಿ ಕಾಫಿ ಬೆಳೆ ಪ್ರಸ್ತುತ ಸ್ಥಿತಿ ಮತ್ತು ಮಾರುಕಟ್ಟೆ ಅವಕಾಶಗಳು ಹಾಗೂ ಹವಾಮಾನ ಬದಲಾವಣೆ ಪರಿಣಾಮ ತಡೆಗಟ್ಟುವಲ್ಲಿ ನೆರಳು ಮರಗಳ ಮಹತ್ವದ ಕುರಿತು ತಿಳಿಸಿ ಉತ್ಪಾದನೆ ಹೆಚ್ಚಿಸಲು ಉತ್ತಮ ತಳಿಗಳ ಆಯ್ಕೆ ಸಮರ್ಪಕ ಗೊಬ್ಬರ ಬಳಕೆ ಸಮತೋಲಿತ ಪೋಷಕಾಂಶ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.ಕೇಂದ್ರ ಕಾಫಿ ಸಂಶೋಧನಾ ಕೇಂದ್ರ ಚೆಟ್ಟಳ್ಳಿಯ ಮಣ್ಣು ವಿಜ್ಞಾನ ತಜ್ಞ ಡಾ. ಎಸ್ ಎ ನಡಾಫ್, ಮಣ್ಣಿನ ಆರೋಗ್ಯದ ಕಾರ್ಯಾಗಾರದಲ್ಲಿ pH ಮಟ್ಟ, NPK ಪ್ರಮಾಣ, ಸೂಕ್ಷ್ಮ ಪೋಷಕಾಂಶಗಳ ಪರೀಕ್ಷೆ ಮಾಡಿಸುವುದು ಮತ್ತು ಮಣ್ಣು ಪರೀಕ್ಷೆಯ ಮಹತ್ವ ಅರಿತುಕೊಳ್ಳಬೇಕು.ಆಮ್ಲೀಯ ಮಣ್ಣು ಸರಿಪಡಿಸಲು ಸುಣ್ಣ ಬಳಕೆ: ಆರ್ಗಾನಿಕ್ ಕಾರ್ಬನ್ ಹೆಚ್ಚಿಸಲು ಹಸಿರು ಗೊಬ್ಬರ, ಎರೆಹುಳು ಗೊಬ್ಬರ ಬಳಕೆಯಿಂದ ಮಣ್ಣಿನ ಸಮತೋಲನ ಕಾಯ್ದಕೊಳ್ಳಬಹುದು ಹಾಗೂ ಹೊದಿಕೆ ಕೃಷಿಯಿಂದ ಮಣ್ಣಿನ ತೇವಾಂಶವನ್ನು ಉಳಿಸಲು ಸತತ ಕೃಷಿ ವಿಧಾನವನ್ನು ಬಳಸಿಕೊಳ್ಳಬೇಕು ಎಂದು ಮಾಹಿತಿಯನ್ನು ನೀಡಿದರು.ರೈತರಿಗೆ ತಾಂತ್ರಿಕ ಜ್ಞಾನ, ಪರಿಸರ ಸ್ನೇಹಿ ಪದ್ಧತಿಗಳು ಹಾಗೂ ಆದಾಯ ವೃದ್ಧಿಗೆ ಅಗತ್ಯವಾದ ಮಾರ್ಗದರ್ಶನ ಕಾರ್ಯಾಗಾರವನ್ನು ತಾಲೂಕು ಪಂಚಾಯತ್ ನಿರ್ವಾಹಣಾಧಿಕಾರಿ ಪರಮೇಶ್ ಉದ್ಘಾಟಿಸಿ ಇಂತಹ ಸಮಾಲೋಚನಾ ಕಾರ್ಯಾಗಾರಗಳು ರೈತರ ಸಬಲೀಕರಣಕ್ಕೆ ಮಹತ್ತರವಾದ ಅವಕಾಶ ಕಲ್ಪಿಸಿ ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭ ಸೋಮವಾರಪೇಟೆ ಅರಣ್ಯ ಅಧಿಕಾರಿ ಗಣೇಶ್ ಮಡಿಕೇರಿ, ಅರಣ್ಯ ಅಧಿಕಾರಿ ಕೊಟ್ರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವಿ ಜಿ ಲೋಕೇಶ್, ಹೆಚ್ ಪಿ ರವೀಶ್ ಬೈಫ್ ಸಂಸ್ಥೆಯ ಪ್ರಸನ್ನ ಹೆಚ್ ಕೆ, ರೇವಣ್ಣ ಸಿದ್ದಪ್ಪ, ಸಾಗರ್ ಹಾಗೂ ಗ್ರಾಮದ ನೂರಾರು ಮಂದಿ ರೈತರು ಕಾಫಿ ಬೆಳಗಾರರು ಪಾಲ್ಗೊಂಡಿದ್ದರು.