ಯಲ್ಲಾಪುರ: ಪಶ್ಚಿಮ ಘಟ್ಟದ ಗ್ರಾಮಭೂಮಿ ಸಂರಕ್ಷಣೆಗಾಗಿ ಪಾರಂಪರಿಕ ಬೆಟ್ಟ, ಕಾನು, ದೇವರ ಕಾಡು, ಗೋಮಾಳ ಸೇರಿದಂತೆ ಜೀವವೈವಿಧ್ಯದ ಉಳಿವಿಗಾಗಿ ಮಲೆನಾಡಿನ ರೈತರ ಸಾಮೂಹಿಕ ನೈಸರ್ಗಿಕ ಸಂಪತ್ತಿನ ಸುಸ್ಥಿರ ಅಭಿವೃದ್ಧಿಗಾಗಿ ವೃಕ್ಷಲಕ್ಷ ಆಂದೋಲನ ಜಿಲ್ಲಾ ಅಡಿಕೆ, ಸಾಂಬಾರು, ಬೆಳೆಗಾರರ ಸಂಘ, ಕದಂಬ ಸಾವಯವ ಸಂಸ್ಥೆ, ಜಿಲ್ಲಾ ಸಾವಯವ ರೈತ ಒಕ್ಕೂಟ, ಟಿಎಂಎಸ್, ವೃಕ್ಷಲಕ್ಷ ಆಂದೋಲನಗಳ ಸಂಯುಕ್ತ ಆಶ್ರಯದಲ್ಲಿ ಜಾಗೃತಿ ಅಭಿಯಾನ ನಡೆಸಲು ನಿರ್ಣಯಿಸಲಾಗಿದೆ ಎಂದು ವೃಕ್ಷಲಕ್ಷ ಆಂದೋಲನದ ಅಣಮತ ಹೆಗಡೆ ಅಶಿಸರ ಹೇಳಿದರು.ಜಾಗೃತಿ ಅಭಿಯಾನದ ರೂಪುರೇಷೆ ವಿವರಿಸಿದ ಅವರು, ಮೇ ೨೨ರಂದು ತಾಲೂಕಿನ ಆನಗೋಡಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಂತರಾಷ್ಟ್ರೀಯ ಜೀವ ವೈವಿಧ್ಯತಾ ದಿನಾಚರಣೆಯ ಪ್ರಯುಕ್ತ ಈ ಅಭಿಯಾನ ನಡೆಯಲಿದ್ದು, ಯಲ್ಲಾಪುರದಲ್ಲಿ ಅರ್ಥಪೂರ್ಣವಾಗಿ ನಡೆಯುತ್ತದೆಯೆಂಬ ವಿಶ್ವಾಸ ವ್ಯಕ್ತಪಡಿಸಿದರು.
ರವಿ ಭಟ್ಟ ಬರಗದ್ದೆ ಮಾತನಾಡಿ, ಬೆಟ್ಟಗಳಲ್ಲಿ ಯಾವುದೇ ಬಗೆಯ ಹಣ್ಣು-ಹಂಪಲು ಬೆಳೆದರೂ ವನ್ಯಜೀವಿಗಳ ಕಾಟ ಮಿತಿಮೀರಿದೆ. ನಮ್ಮ ಪ್ರದೇಶದಲ್ಲಿ ಅವುಗಳ ನಿರ್ವಹಣೆ ಬಲು ಕಷ್ಟ ಎಂದರು.
ಕದಂಬ ಸಂಸ್ಥೆಯ ಪ್ರಮುಖ ವಿಶ್ವೇಶ್ವರ ಭಟ್ಟ, ಯಡಳ್ಳಿ ಸೇ.ಸ.ಸಂಘದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ, ತಾಲೂಕು ರೈತ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಗಣಪತಿ ಬಿಸಲಕೊಪ್ಪ, ದತ್ತಾತ್ರೇಯ ಬೊಳಗುಡ್ಡೆ ಇದ್ದರು. ಕೆ.ಎಸ್.ಭಟ್ಟ ಸ್ವಾಗತಿಸಿದರು. ನರಸಿಂಹ ಸಾತೊಡ್ಡಿ ವಂದಿಸಿದರು.