ಕನ್ನಡಪ್ರಭ ವಾರ್ತೆ ಸಿರಿಗೆರೆ
ಭರಮಸಾಗರ ಹೋಬಳಿ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಆಯೋಜನೆಗೊಳ್ಳುತ್ತಿರುವ 9 ದಿನಗಳ ವೈಭವದ ಸಮಾರಂಭದ ಸಿದ್ಧತೆಗಳನ್ನು ವೀಕ್ಷಿಸಿ, ಕಾರ್ಯಕರ್ತರು ತನು ಮನ ಧನಗಳಿಂದ ಹುಣ್ಣಿಮೆ ಮಹೋತ್ಸವ ಯಶಸ್ಸಿಗೆ ದುಡಿಯುತ್ತಿರುವುದನ್ನು ಶ್ಲಾಘಿಸಿದರು.
ಮಂಟಪ ನಿರ್ಮಾಣಗೊಳ್ಳಲಿರುವ ಪ್ರದೇಶದಲ್ಲಿ ಸಜ್ಜುಗೊಳ್ಳುತ್ತಿರುವ ಕ್ರೀಡಾ ಅಂಕಗಳು, ಕುಸ್ತಿ ಅಖಾಡಗಳನ್ನೂ ವೀಕ್ಷಿಸಿದರು.ಹುಣ್ಣಿಮೆ ಮಹೋತ್ಸವ ಮಂಟಪ ನಿರ್ಮಾಣ ವೀಕ್ಷಿಸಲು ಈ ಹಿಂದೆಯೇ ಬರುವ ಆಲೋಚನೆ ಇದ್ದರೂ ಕಾರ್ಯದೊತ್ತಡದಿಂದ ಸಾಧ್ಯವಾಗಲಿಲ್ಲ. ʻಗುರುವಾದಡೋ ಕಾಯಕದಿಂದಲೇ ಜೀಮನ್ಮುಕ್ತಿʼ ಎಂಬ ಬಸವಣ್ಣನವರ ಮಾತುಗಳಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.2023ರಲ್ಲಿ ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ 2024ರ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ ನಡೆಯುವುದು ಎಂದು ಘೋಷಣೆ ಮಾಡಿದ್ದೆವು. ಅಂದುಕೊಂಡಂತೆ ಕಳೆದ ವರ್ಷವೇ ಇಲ್ಲಿ ಹುಣ್ಣಿಮೆ ಮಹೋತ್ಸವ ನಡೆದಿದ್ದರೆ ಅಷ್ಟು ಸಂಭ್ರಮ ಇರುತ್ತಿರಲಿಲ್ಲ. ಈಗ ಈ ಭಾಗದ ಕೆರೆಗಳೆಲ್ಲವೂ ತುಂಬಿ, ಜನರ ಕೃಷಿ ಚಟುವಟಿಕೆಗಳು ಇಮ್ಮಡಿಗೊಂಡಿರುವುದರಿಂದ ಸಹಜವಾಗಿಯೇ ಭಕ್ತರ ಉತ್ಸಾಹ ಇಮ್ಮಡಿಗೊಂಡಿದೆ ಎಂದರು.
ತರಳಬಾಳು ಹುಣ್ಣಿಮೆ ಮಹಾಮಂಟಪಕ್ಕೆ ʻಬಿಚ್ಚುಗತ್ತಿ ಭರಮಣ್ಣನಾಯಕ ಮಹಾಮಂಟಪʼ ಮಹಾದ್ವಾರಕ್ಕೆ ಒನಕೆ ಓಬವ್ವ ಮಹಾದ್ವಾರ, ವೇದಿಕೆಗೆ ಚಿನ್ಮೂಲಾದ್ರಿ ರೇವಣಸಿದ್ದೇಶ್ವರ ವೇದಿಕೆ ಎಂದು ನಾಮಕರಣ ಮಾಡಲಾಗುವುದು ಎಂದು ಶ್ರೀಗಳು ಪ್ರಕಟಿಸಿದರು. ಈ ಮೂವರು ಪ್ರಾಥಃಸ್ಮರಣೀಯರು ಚಿತ್ರದುರ್ಗದ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಅವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.
ಈ ವೇಳೆ ಎಸ್.ಎಂ.ಎಲ್. ತಿಪ್ಪೇಸ್ವಾಮಿ, ಎಮ್ಮೆಹಟ್ಟಿ ಕೃಷ್ಣಮೂರ್ತಿ, ಚೌಲಿಹಳ್ಳಿ ಶಶಿ ಪಾಟೀಲ್, ಜಿ.ಬಿ. ತೀರ್ಥಪ್ಪ, ಶೈಲೇಶ್ ಕುಮಾರ್, ನಿರಂಜನಮೂರ್ತಿ, ಹಂಪನೂರು ಜಗದೀಶ್, ಕೋಡಿರಂಗವ್ವನಹಳ್ಳಿ ಹನುಂತಪ್ಪ, ಓಬವ್ವನಾಗತಿಹಳ್ಳಿ ಮಂಜುನಾಥ್, ದೊಡ್ಡಾಲಗಟ್ಟ ಗ್ರಾಪಂ ಅಧ್ಯಕ್ಷ ನಾಗರಾಜ್, ಸಿ.ಆರ್. ನಾಗರಾಜ್ ಮುಂತಾದವರು ಭಾಗವಹಿಸಿದ್ದರು.
ಬಾಕ್ಸ್:
ಮಹೋತ್ಸವ ಆಚರಣೆ ನಿಧಿಗೆ ಭಕ್ತಾದಿಗಳು ಸಲ್ಲಿಸಿದ ಕಾಣಿಕೆ ನೋಡುವವರನ್ನು ಬೆರಗುಗೊಳಿಸಿತು. ಕಾರ್ಯಕರ್ತರು ಪ್ರಕಟಿಸುತ್ತಿದ್ದಂತೆ ನೂರಾರು ಭಕ್ತರು ವೇದಿಕೆಗೆ ದಾವಿಸಿ ತಮ್ಮ ಗ್ರಾಮಗಳಿಂದ ಸಂಗ್ರಹಿಸಿದ ನಿಧಿಯನ್ನು ಶ್ರೀಗಳಿಗೆ ನೀಡಿದರು.
ಚೌಲಿಹಳ್ಳಿ ಶಶಿ ಪಾಟೀಲ್ ತಮ್ಮ ಪತ್ನಿಯ ಜೊತೆಗೂಡಿ ಶ್ರೀಗಳಿಗೆ 10 ಲಕ್ಷ ರು.ನಿಧಿ ಸಮರ್ಪಿಸಿದರು. ನಂತರ ಓಬವ್ವನಾಗತಿಹಳ್ಳಿ ಮಂಜುನಾಥ್ ಅವರು ತಮ್ಮ ದೇಣಿಗೆಯಾಗಿ 4 ಲಕ್ಷ ರು. ಮೊತ್ತವನ್ನು ಶ್ರೀಗಳಿಗೆ ಸಲ್ಲಿಸಿದ್ದಾರೆ.