ಕನ್ನಡಪ್ರಭ ವಾರ್ತೆ ಹಾಸನ
ವಿಶ್ವ ಹಿಂದೂ ಪರಿಷದ್, ಬಜರಂಗದಳ - ಹಾಸನದ ವತಿಯಿಂದ ಹನುಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಶುಕ್ರವಾರ ಸಂಜೆ ನಗರದ ತಣ್ಣೀರುಹಳ್ಳ ಮಠದ ಆವರಣದಿಂದ ನೂರಾರು ಜನ ಬೈಕ್ ರ್‍ಯಾಲಿ ನಡೆಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು. ಹನುಮ ಮಹೋತ್ಸವದ ಅಂಗವಾಗಿ ಕಳೆದ ಒಂದು ದಿನಗಳಿಂದ ಸರಣಿ ಕಾರ್ಯಕ್ರಮ ನಡೆಯುತ್ತಿದೆ. ಗುರುವಾರ ಶ್ರೀರಾಮನ ಹೋಮ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಸಂಜೆ ಬೈಕ್ ರ್‍ಯಾಲಿ ನಡೆಸಲಾಗುತ್ತಿದೆ ಎಂದರು. ನಾವು ಧಾರ್ಮಿಕ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕಾಗಿದೆ. ನಾವೆಲ್ಲರೂ ಹಿಂದೂ ಸಮಾಜದ ಜಾಗೃತಿಗೆ ಹಾಗೂ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ತಾಯಿ ಭಾರತಿಯ, ರಾಮ - ಹನುಮರ ಆಕರ್ಷಕ ಜಿಪ್ಸಿ ಎಲ್ಲರ ಗಮನ ಸೆಳೆಯಿತು. ಸುಮಾರು ೭೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಬೈಕ್‌ನೊಂದಿಗೆ ಆಗಮಿಸಿದ್ದ ಹಿಂದೂ ಬಾಂಧವರು ಭಾರತ ಮಾತಾ ಕಿ ಜೈ, ಜೈ ಶ್ರೀ ರಾಮ್, ವಂದೇ ಮಾತರಂ ಹಲವಾರು ಘೋಷಣೆಗಳನ್ನು ಕೂಗುತ್ತಾ ಮುಂದೆ ಸಾಗಿದರು. ಬೃಹತ್ ಬೈಕ್ ಜಾಥಾ ಹಾಸನದ ಹಲವಾರು ರಸ್ತೆಗಳಲ್ಲಿ ಸಾಗಿ ಕಲಾಭವನದಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಅನೂಪ್, ಮಹಿಪಾಲ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸಾಯಿಪ್ರಸಾದ್, ಜಿಲ್ಲಾ ಕಾರ್ಯದರ್ಶಿ ವಿಕಾಸ್, ಸಹ ಕಾರ್ಯದರ್ಶಿ ಮಂಜು, ಬಜರಂಗದಳ ಸಂಯೋಜಕ ಅಭಿಷೇಕ್, ಪ್ರಚಾರ - ಪ್ರಸಾರ ಪ್ರಮುಖ್ ಪ್ರಣವ ಭಾರಧ್ವಜ, ಬಜರಂಗದಳ ಹಾಸನ ನಗರ ಸಂಯೋಜಕ ಯಶ್ವಂತ್, ವಿ.ಹಂ.ಪ ಹಾಸನ ನಗರ ಕಾರ್ಯದರ್ಶಿ ಶಶಾಂಕ್, ಪವನ್, ದಿನೇಶ್ ಸಿಂಗ್,ಬಿಜೆಪಿ ವೇಣುಗೋಪಾಲ್ ಹಾಗೂ ಹಿಂದೂಪರ ಕಾರ್ಯಕರ್ತರು, ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.