ಕನ್ನಡಪ್ರಭ ವಾರ್ತೆ ಮೈಸೂರು
ಸಕ್ಕರೆ ನಾಡು ಮಂಡ್ಯ ವ್ಯಾಪ್ತಿಯ ಕೆಆರ್ಎಸ್ ಜಲಾಶಯದ ಮಾದರಿಯಲ್ಲಿ ಪೊನ್ನಟ ನಾಡಿನ ಕಬಿನಿ ಜಲಾಯಶವನ್ನು ಕೂಡಾ ಎಲ್ಲಾ ರೀತಿಯಲ್ಲೂ ಅಭಿವೃದ್ದಿಪಡಿಸಬೇಕು ಎಂದು ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಸಿ. ಚಂದನ್ ಗೌಡ ಮನವಿ ಮಾಡಿದರು.ಕಬಿನಿ ಬಲದಂಡೆ ನಾಲೆ ದುರಸ್ತಿ ಕುರಿತು ಸ್ಥಳೀಯರ ದೂರಿನ ಮೇರೆಗೆ ಶುಕ್ರವಾರ ರೈತ ಕಲ್ಯಾಣ ತಂಡದ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಮೈಸೂರು ಮುಕುಟಮಣಿ ಮಹಾರಾಜರ ಅಚ್ಚುಮೆಚ್ಚಿನ ತಾಣ. ಒಂದೇ ತಾಲೂಕಿನಲ್ಲಿ ನಾಲ್ಕು ಅಣೆಕಟ್ಟು ಜಲಾಶಯಗಳನ್ನ ಹೊಂದಿರುವ ವನಸಿರಿ ನಾಡೆಂದೇ ಪ್ರಖ್ಯಾತಿ ಪಡೆದಿರುವ ಪೊನ್ನಟ ನಾಡು ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಡ್ಯಾಮ್ ಅನ್ನು ಕೃಷ್ಣರಾಜಸಾಗರ ಪ್ರವಾಸಿ ತಾಣದಂತೆ ಅಭಿವೃದ್ಧಿ ಪಡಿಸಬೇಕು ಹಾಗೂ ಶೀಘ್ರವೇ ಕಬಿನಿ ಬಲದಂಡೆ ನಾಲೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ದುರಸ್ತಿ ಆಗಬೇಕಿರುವ ಸ್ಥಳವನ್ನು ಈಗಾಗಲೇ ವೀಕ್ಷಿಸಿ, ಪರಿಶೀಲಿಸಲಾಗಿದ್ದು, ಕಬಿನಿ ಅಭಿವೃದ್ದಿಯಾಗಲಿ. ವನಸರಿ ನಾಡು ಎಚ್.ಡಿ. ಕೋಟೆ ತಾಲೂಕು ಹಿಂದುಳಿದ ತಾಲೂಕು ಎಂಬ ಕಪ್ಪು ಪಟ್ಟಿಯಿಂದ ಅಳಿಸಲಿ. ಪ್ರವಾಸೋದ್ಯಮದಿಂದ ತಾಲೂಕು ಸಂಪದ್ಭರಿತವಾಗಲಿ. ಉದ್ಯೋಗ ನಿರ್ಮಾಣವಾಗಲಿ. ಮತ್ತೊಮ್ಮೆ ಎಚ್.ಡಿ.ಕೋಟೆ ತಾಲೂಕನ್ನು ವಿಶ್ವವೇ ತಿರುಗಿ ನೋಡುವಂತಾಗಲಿ. ಸಾಕಷ್ಟು ಅಭಿವೃದ್ದಿಯ ಹಿತಚಿಂತನೆಯಿಂದ ಕಬಿನಿ ಜಲಾಶಯ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಕೂಡಾ ಮಾರ್ಪಡಿಸಿ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ ಎಂದು ಅವರು ಕೋರಿದರು.
ಈ ವೇಳೆ ಸ್ಥಳದಲ್ಲಿದ್ದ ಇಇ ಚಂದ್ರಶೇಖರ್, ಎಇಇ ಗಣೇಶ್, ಎಂಜಿನಿಯರ್ ರಮೇಶ್ ಕುಮಾರ್ ಮತ್ತು ಅಧಿಕಾರಿಗಳ ತಂಡದವರು ಜಲಾಶಯದ ಬಲದಂಡೆ ನಾಲೆ ದುರಸ್ತಿ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ದೆಹಲಿಯಿಂದ ನುರಿತ ತಜ್ಞರು ಆಗಮಿಸಿ ದುರಸ್ಥಿ ಕಾರ್ಯದ ಕುರಿತು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸರ್ಕಾರದಿಂದ ಕೂಡಾ 4.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.ಈ ವೇಳೆ ಎಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕಿನ ಸಂಘಟನೆಯ ಪದಾಧಿಕಾರಿಗಳು ಇದ್ದರು.