ಹುಬ್ಬಳ್ಳಿ: ನಗರದಲ್ಲಿ ಧಾರವಾಡ ಸಂಸದ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ ಅಂಗವಾಗಿ ಎರಡು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹುಬ್ಬಳ್ಳಿಗರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.
ಗಾಳಿಪಟ ಉತ್ಸವಕ್ಕೆ ನೆರೆ ರಾಷ್ಟ್ರ, ನೆರೆ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದರು. ಗಾಳಿಪಟ ಕಲಿಗಳು ಬಾನಂಗಳದಲ್ಲಿ ಹಾರಾಡಿಸಿದ ಬಣ್ಣ ಬಣ್ಣದ ಗಾಳಿಪಟಗಳು ಮನಸೆಳೆದವು. ಎರಡು ದಿನಗಳ ಕಾಲವೂ ಮುಗಿಲೆತ್ತರದಲ್ಲಿ ರಾರಾಜಿಸಿದ ಕಲರ್ಫುಲ್ ಗಾಳಿಪಟಗಳು ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾದವು. ಅಮೆರಿಕಾ, ಸಿಂಗಾಪುರ, ಟರ್ಕಿ, ಆಸ್ಪ್ರೇಲಿಯಾ ಸೇರಿದಂತೆ ದೇಶದ ನಾನಾ ಭಾಗದ ಗಾಳಿಪಟ ಕಲಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.ನಗರದ ಅನೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಾ ಮುಂದು, ತಾ ಮುಂದು ಎನ್ನುತ್ತ ಭಿನ್ನ, ಭಿನ್ನ ಗಾಳಿಪಟಗಳನ್ನು ಹಾರಿಸುತ್ತ ವಿದೇಶಿಗರೊಂದಿಗೆ ಸ್ಪರ್ಧೆಯೊಡ್ಡಿ ಖುಷಿಪಟ್ಟರು. ಯುವಕರು, ಯುವತಿಯರು ಎನ್ನದೇ, ಪುಟಾಣಿ ಮಕ್ಕಳಾದಿಯಾಗಿ ಗಾಳಿಪಟ ತೇಲಿಬಿಟ್ಟು ಶಿಳ್ಳೆ, ಚಪ್ಪಾಳೆ ಹೊಡೆಯುತ್ತ, ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸಿದ ದೃಶ್ಯಗಳು ಸಾಮಾನ್ಯವಾಗಿದ್ದವು.ಅದರಲ್ಲೂ ಶುಕ್ರವಾರ ಬೆಳಗ್ಗೆ ನಡೆದ ದೇಸಿ ಕ್ರೀಡೆ ಮಲ್ಲಗಂಬದಲ್ಲಿ ಮಕ್ಕಳು ಅದ್ಭುತ ಪ್ರದರ್ಶನ ನೀಡಿದರು. ಕುಸ್ತಿಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಿಶ್ವ ವಿದ್ಯಾಲಯದ ಹಂತದ ಪ್ರಶಸ್ತಿ ಪುರಸ್ಕೃತ ಕುಸ್ತಿಪಟುಗಳು ಮತ್ತು ರಾಜ್ಯ, ಅಂತಾರಾಜ್ಯ ಮಟ್ಟದ ಪ್ರಸಿದ್ಧ ಕುಸ್ತಿಪಟುಗಳ ಕಾದಾಟ ಕ್ರೀಡಾ ಪ್ರೇಕ್ಷಕರ ಮೈನವಿರೇಳಿಸುವಂತಿತ್ತು.
ರಂಜಿಸಿದ ಸಂಗೀತಧಾರವಾಡ ಸಂಸದ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಘು ದೀಕ್ಷಿತ್, ಬಿಗ್ಬಾಸ್ 11ರ ವಿನ್ನರ್ ಹನುಮಂತ ಲಮಾಣಿ ಆಕರ್ಷಣಿಯ ಕೇಂದ್ರಬಿಂದು ಆಗಿದ್ದರು. ಹನುಮಂತ ಲಮಾಣಿ ಜಾನಪದ ಸೊಡಗಿನ ಹಾಡು, ಹಾಸ್ಯಭರಿತ ಮಾತುಗಳಿಗೆ ಜನರು ಕೇಕೆ, ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರೆ, ರಘು ದೀಕ್ಷಿತ್ ಅವರ ಹಾಡಿಗೆ ಜನರು ಕುಣಿದು ಕುಪ್ಪಳಿಸಿದರು. ನಂತರ ನಡೆದ ಸಮಾರೋಪ ಸಮಾರಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.