ಅಳ್ನಾವರದಲ್ಲಿ ನಾಳೆ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆ

KannadaprabhaNewsNetwork | Published : May 10, 2024 11:49 PM

ಸಾರಾಂಶ

ಭಾನುವಾರ ಮೇ ೧೨ರಂದು ಎಪಿಎಂಸಿ ಪಕ್ಕದ ಜಯವಂತ ಪೇಜೋಳ್ಳಿಯವರ ಹೊಲದಲ್ಲಿ ಆಯೋಜನೆ ಮಾಡಿರುವ ಕುಸ್ತಿ ಪಂದ್ಯಾವಳಿಯಲ್ಲಿ ದೇಶ ವಿದೇಶಗಳಿಂದ ಕುಸ್ತಿ ಪಟುಗಳು ಭಾಗವಹಿಸಿ ಕುಸ್ತಿ ಪ್ರದರ್ಶನ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಅಳ್ನಾವರ

ಪಟ್ಟಣದಲ್ಲಿ ಇತ್ತಿಚೆಗಷ್ಟೆ ಹನ್ನೆರಡು ವರ್ಷಗಳ ನಂತರ ಜರುಗಿದ ಗ್ರಾಮದೇವಿಯ ಜಾತ್ರಾ ಉತ್ಸವಕ್ಕೆ ತೆರೆಯಳೆಯುತ್ತಿದ್ದಂತೆ ಭಾಗದ ಜನರು ರಾಜು ಪೇಜೋಳ್ಳಿಯವರು ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಕುತೂಹಲ ಭರಿತರಾಗಿದ್ದಾರೆ.

ಪಟ್ಟಣದಲ್ಲಿ ಇದೆ ಭಾನುವಾರ ಮೇ ೧೨ರಂದು ಎಪಿಎಂಸಿ ಪಕ್ಕದ ಜಯವಂತ ಪೇಜೋಳ್ಳಿಯವರ ಹೊಲದಲ್ಲಿ ಆಯೋಜನೆ ಮಾಡಿರುವ ಕುಸ್ತಿ ಪಂದ್ಯಾವಳಿಯಲ್ಲಿ ದೇಶ ವಿದೇಶಗಳಿಂದ ಕುಸ್ತಿ ಪಟುಗಳು ಭಾಗವಹಿಸಿ ಕುಸ್ತಿ ಪ್ರದರ್ಶನ ನೀಡಲಿದ್ದಾರೆ.

ಪಟ್ಟಣದ ಎಪಿಎಂಸಿ ಹತ್ತಿರ ಸಿದ್ಧಪಡಿಸಿರುವ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ೩ಕ್ಕೆ ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಮತ್ತು ಮಾಜಿ ಪೈಲವಾನರು ಉಪಸ್ಥಿತರಿದ್ದು, ಕುಸ್ತಿ ಪಟುಗಳಿಗೆ ಸ್ಥೈರ್ಯ ತುಂಬಲಿದ್ದಾರೆ.ಅಂತಾರಾಷ್ಟ್ರೀಯ ಚಾಂಪಿಯನ್ ಇರಾನ್ ದೇಶದ ರಿಝಾ ಜೊತೆಗೆ ಕರ್ನಾಟಕದ ರೋಹನ ಮತ್ತು ಇರಾನದ ಮುಬಿನಾ ಜೊತೆ ಹಳಿಯಾಳ ತಾಲೂಕಿನ ಗಾಯತ್ರಿ ಸುತಾರ ಮತ್ತು ಇರಾನ್‌ ದೇಶದ ಮಿರ್ಜಾ ಜೊತೆ ಮಹಾರಾಷ್ಟ್ರದ ಸಿಖಂದರ ಶೇಖ ಸೆಣಸಲಿದ್ದಾರೆ.

ಪಂಜಾಬ, ಹರಿಯಾಣಾ, ಮಹಾರಾಷ್ಟ್ರ ಕರ್ನಾಟಕ ಹೀಗೆ ಒಟ್ಟು ೨೦೦ ಜನ ಪುರುಷ ಮತ್ತು ೫೦ ಮಹಿಳಾ ಕುಸ್ತಿ ಪಟುಗಳು ಪಾಲ್ಗೊಳ್ಳಲಿರುವ ಈ ಪಂದ್ಯಾವಳಿಗೆ ಮೈದಾನ ಸಜ್ಜುಗೊಂಡಿದ್ದು ಸುಮಾರು ಮೂವತ್ತರಿಂದ ನಾಲವತ್ತು ಸಾವಿರ ಜನರು ಏಕಕಾಲಕ್ಕೆ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಕುಸ್ತಿ ಆಟವೂ ಈ ದೇಶದ ಪುರಾತನ ಆಟಗಳಲ್ಲೊಂದಾಗಿದ್ದು ಪ್ರತಿಯೊಂದು ಗ್ರಾಮದಲ್ಲಿಯೂ ವ್ಯಾಯಾಮ ಶಾಲೆಗಳಿದ್ದು, ಇತ್ತೀಚಿನ ದಿನಗಳಲ್ಲಿ ಅವು ಕಣ್ಮರೆಯಾಗುತ್ತಿವೆ. ಆದ್ದರಿಂದ, ಈ ದೇಶಿ ಆಟ ಮುಂದಿನ ಜನಾಂಗಕ್ಕೆ ಉಳಿಸಿಕೊಂಡು ಹೋಗಲು ಈ ಪಂದ್ಯವನ್ನು ಆಯೋಜನೆ ಮಾಡಿರುವುದಾಗಿ ಸ್ಪರ್ಧಾ ಆಯೋಜಕ ರಾಜು ಪೇಜೋಳ್ಳಿ ತಿಳಿಸಿದ್ದಾರೆ.

Share this article