ಉಡುಪಿ: ನಗರದ ನೇತ್ರ ಜ್ಯೋತಿ ಕಾಲೇಜು ಮತ್ತು ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ನೇತ್ರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸುಲತಾ ಭಂಡಾರಿ, ಮಹಿಳೆಯರು ಯಾವುದೇ ಕೀಳರಿಮೆ ಇಲ್ಲದೆ ಜೀವದಲ್ಲಿ ಮುನ್ನುಗಿದರೆ ಯಶಸ್ಸು ಕಂಡುಕೊಳ್ಳಲು ಸಾಧ್ಯ. ಮುಂದಿನ ದಿನಗಳಲ್ಲಿ ನೇತ್ರ ಜ್ಯೋತಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಸಾಧನೆ ಮಾಡಿ ಸನ್ಮಾನ ಸ್ವೀಕರಿಸುವಂತಾಗಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನೇತ್ರ ಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ಮಹಿಳೆ ಈಗ ಅಬಲೆ ಅಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅವಳ ಸಾಧನೆ ಅಮೋಘವಾದುದು. ಪುರುಷರ ಏಳಿಗೆಯಲ್ಲಿ ಮಹಿಳೆಯ ಪಾತ್ರ ಯಾವತ್ತೂ ಇರುತ್ತದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ನೇತ್ರ ಜ್ಯೋತಿ ಕಾಲೇಜಿನ ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್, ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿ ದಿನವೂ ಮಹಿಳೆಯರಿಗೆ ಗೌರವ ನೀಡುವಂತಾಗಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಅಮೃತ ಕೃಷ್ಣಮೂರ್ತಿ, ಅರುಣಾಕಲ, ಅನಿತಾ ಬಾಳಿಗ, ಡಾ. ಕಾಂತಿ ಹರೀಶ್, ಡಾ. ಅರ್ಚನಾ ಎಂ.ವಿ., ಡಾ. ಶ್ರುತಿ ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಸಿಓಓ ಡಾ. ಗೌರಿ ಪ್ರಭು ಉಪಸ್ಥಿತರಿದ್ದರು. ಶ್ರಾವ್ಯ ಸಂಗಡಿಗರು ಪ್ರಾರ್ಥಿಸಿದರು. ಮಾಧವ ಪೂಜಾರಿ ಸ್ವಾಗತಿಸಿ, ವಿದ್ಯಾರ್ಥಿ ಚರಣರಾಜ್ ವಂದಿಸಿದರು.