ಕನ್ನಡಪ್ರಭ ವಾರ್ತೆ ಬೆಂಗಳೂರು
ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶುಕ್ರವಾರ ರಾಜ್ಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬಳ್ಳಾರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್, ಡಿ.ಕೆ.ಶಿವಕುಮಾರ್, ಮೈಸೂರಲ್ಲಿ ಸಚಿವ ಡಾ.ಮಹದೇವಪ್ಪ ಸೇರಿ ವಿವಿಧೆಡೆ ಸಚಿವರು ಯೋಗಾಸನ ಮಾಡಿದರೆ, ಉಡುಪಿ ಸೇರಿ ಕೆಲವಡೆ ಸ್ವಾಮೀಜಿಗಳೂ ಯೋಗ ಪ್ರದರ್ಶಿಸಿ ಯೋಗದಿನಾಚರಣೆಯನ್ನು ಅರ್ಥಪೂರ್ಣಗೊಳಿಸಿದರು.ಬಳ್ಳಾರಿಯಲ್ಲಿ ಸಿಎಂ ಚಾಲನೆ:ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್ಲಿನ ಜೆಎಸ್‍ಡಬ್ಲ್ಯೂ ಟೌನ್‍ಶಿಪ್ ವಿದ್ಯಾನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಬಳಿಕ ಲವಲವಿಕೆಯಿಂದ ಕೆಲ ಯೋಗಾಸನಗಳನ್ನು ಮಾಡಿ ಗಮನ ಸೆಳೆದರು.
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಗಳು ಮುಖ್ಯಮಂತ್ರಿ, ಸಚಿವರಾದ ಸಂತೋಷ್ ಲಾಡ್, ಜಮೀರ್ ಅಹಮದ್, ಶಾಸಕರು ಸೇರಿ ವಿವಿಧ ಶಾಲೆಗಳ ಮಕ್ಕಳು, ಸಾರ್ವಜನಿಕರಿಗೆ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿ ಅದರ ಮಹತ್ವ ವಿವರಿಸಿದರು.ಯೋಗದಿಂದ ನೆಮ್ಮದಿ:
ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಕೂಡ ಯೋಗಾಭ್ಯಾಸ ಮಾಡಿ ಗಮನಸೆಳೆದರು. ಈ ವೇಳೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ತುಂಬ ಸಂತಸ ತಂದಿದೆ. ಯೋಗ-ಧ್ಯಾನಗಳ ಸತತ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ಎಂದರು. ವಿನಯ್ ಗುರೂಜಿ, ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಸೇರಿ ಹಲವು ಗಣ್ಯರೂ ಪಾಲ್ಗೊಂಡಿದ್ದರು.ಮೈಸೂರಲ್ಲೂ ಯೋಗ ಸಂಭ್ರಮ:
ಮೈಸೂರಿನಲ್ಲಿ ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಯೋಗದಿನಾಚರಣೆ ಪ್ರಯುಕ್ತ ಮುಂಜಾನೆ 45 ನಿಮಿಷಗಳ ಯೋಗಾಭ್ಯಾಸ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿ ಅನೇಕ ಗಣ್ಯರು, ಸಾವಿರಾರು ಮಂದಿ ಯೋಗಾಸಕ್ತರು, ವಿದ್ಯಾರ್ಥಿಗಳು ಯೋಗಾಸನ ಮಾಡಿ ಸಂಭ್ರಮಿಸಿದರು.ಯೋಗ ವಿಥ್ ಯೋಧ:
ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಬೀಚ್‌ನಲ್ಲಿ ‘ಯೋಗ ವಿಥ್ ಯೋಧ’ ಕಾರ್ಯಕ್ರಮದಲ್ಲಿ ಪ್ರಮುಖ ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರು ಮತ್ತು ಇತರ ಗಣ್ಯರು ಸಮುದ್ರ ತೀರದ ಪ್ರಶಾಂತ ವಾತಾವರಣದಲ್ಲಿ ಯೋಗಾಭ್ಯಾಸ ಮಾಡಿದರು.ಯೋಗಾಸನ ಚಿಹ್ನೆ ಆಕಾರ ರಚನೆ:
ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು ಯೋಗಾಸನದ ಚಿಹ್ನೆ ಆಕಾರವನ್ನು ರಚಿಸಿ ವಿಶೇಷವಾಗಿ ಅಂತಾರಾಷ್ಟ್ರೀಯ ಯೋಗದಿನ ಆಚರಿಸಿದರು.ಶ್ರೀಗಳಿಂದ ಯೋಗ:
ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ ಯೋಗದಿನಾಚರಣೆ ಕಾರ್ಯಕ್ರಮಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಯೋಗಾಸನ, ಪ್ರಾಣಾಯಾಮ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು. ಯೋಗ ಬೇರೆ ಹಿಂದು ಧರ್ಮ ಬೇರೆ ಎಂದು ಕೆಲವರು ಪ್ರತ್ಯೇಕವಾದ ಮಾಡುತ್ತಿದ್ದಾರೆ. ಆದರೆ ಯೋಗ ಸನಾತನ ಹಿಂದೂ ಧರ್ಮದ ಶ್ರೇಷ್ಠ ಕೊಡುಗೆದೆ ಎಂದು ಈ ಸಂದರ್ಭದಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.ಇನ್ನು ಮೈಸೂರಿನ ಅವಧೂತ ದತ್ತಪೀಠದ ನಾದ ಮಂಟಪದಲ್ಲಿ ಅವಧೂತ ದತ್ತ ಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಮಕ್ಕಳೊಂದಿಗೆ ಮಕ್ಕಳಾಗಿ ಯೋಗಾಸನ ಮಾಡಿದರು. ಯೋಗಾಸನದ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.
ವಿಧಾನಸೌಧದ ಎದುರು ಯೋಗಪ್ರದರ್ಶನ:ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಯೋಗಾಭ್ಯಾಸ ಪ್ರದರ್ಶನ ಮೂಲಕ ರಾಜ್ಯಪಾಲ ಥಾವರ್‌ಚಂದ್ ಗೆಹಲೋಥ್ ಚಾಲನೆ ನೀಡಿದರು. ಯೋಗವು ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅಮೂಲ್ಯ ಕೊಡುಗೆ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಯೋಗದ ಬಗ್ಗೆ ಉಲ್ಲೇಖಿಸಿದ್ದು, ಅದಕ್ಕಾಗಿ ಭಾರತವನ್ನು ಯೋಗ ಗುರು ಎಂದು ಪರಿಗಣಿಸಲಾಗಿದೆ ಎಂದು ಈ ವೇಳೆ ರಾಜ್ಯಪಾಲ ಅಭಿಪ್ರಾಯಪಟ್ಟರು.ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ನನಗೆ ಯೋಗ ಮಾಡಿ ಅಭ್ಯಾಸವಿಲ್ಲ. ಶಾಲಾ ದಿನಗಳಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದೆ. ಮನೆಯಲ್ಲಿ ಶ್ರೀಮತಿ ಯೋಗ ಮಾಡುತ್ತಾರೆ. ಆದರೆ ಇನ್ನು ಮುಂದೆ ನಾನೂ ಯೋಗಾಭ್ಯಾಸ ಮಾಡುತ್ತೇನೆ ಎಂದು ಹೇಳಿದರು.