ರಾಜ್ಯದಲ್ಲಿ ಗೋಧ್ರಾ ಮಾದರಿ ಪ್ರಕರಣ ನಡೆಯುವ ಸಾಧ್ಯತೆ ಇದೆ ಎಂದು ಹೇಳಿರುವ ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಕೆ. ಹರಿಪ್ರಸಾದ ಅವರನ್ನು ಕೂಡಲೇ ವಿಚಾರಣೆಗೆ ಒಳಪಡಿಸಿ, ಮಾಹಿತಿ ಪಡೆಯಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಕೊಪ್ಪಳ: ರಾಜ್ಯದಲ್ಲಿ ಗೋಧ್ರಾ ಮಾದರಿ ಪ್ರಕರಣ ನಡೆಯುವ ಸಾಧ್ಯತೆ ಇದೆ ಎಂದು ಹೇಳಿರುವ ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಕೆ. ಹರಿಪ್ರಸಾದ ಅವರನ್ನು ಕೂಡಲೇ ವಿಚಾರಣೆಗೆ ಒಳಪಡಿಸಿ, ಮಾಹಿತಿ ಪಡೆಯಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಗಂಭೀರ ವಿಷಯ. ಹೀಗಾಗಿ, ಕೇಂದ್ರ ತನಿಖಾ ಸಂಸ್ಥೆಯಿಂದಲೂ ಇವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಶ್ರೀರಾಮಮಂದಿರ ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ದೇಶವೇ ಹೆಮ್ಮೆಪಡುವ ಈ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿ ನೀಚಬುದ್ಧಿ ಪ್ರದರ್ಶನ ಮಾಡಿದ್ದಾರೆ. ಶ್ರೀರಾಮಮಂದಿರ ಉದ್ಘಾಟನೆಗೆ ಕಳಂಕ ತರುವ ಉದ್ದೇಶವಿದೆ. ಹೀಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಕ್ಷುಲ್ಲಕ ರಾಜಕಾರಣಕ್ಕಾಗಿ ಈ ರೀತಿ ಮಾತನಾಡುವುದು ನಾಚಿಕೆಗೇಡಿತನ. ಇದರ ಹಿಂದೆ ಇರುವ ಉದ್ದೇಶವನ್ನು ಅರ್ಥ ಮಾಡಬೇಕಿದೆ. 500 ವರ್ಷಗಳ ಹೋರಾಟದ ಫಲವಾಗಿ ಈಗ ದೇಶದಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಅದನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡುವುದರಿಂದ ಏನು ಸಂದೇಶ ಹೋಗುತ್ತದೆ ಎನ್ನುವ ಬಗ್ಗೆ ತಿಳಿವಳಿಕೆ ಇಲ್ಲದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನ ಕುತಂತ್ರದ ಕೈವಾಡವಿದೆ ಎಂದರು.
ದೇಶದಲ್ಲಿ ಸುಮಾರು 60 ವರ್ಷ ಅಧಿಕಾರ ನಡೆಸಿರುವ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಾ ಬಂದಿದೆ. ಜಾತಿಗಳನ್ನು ಒಡೆಯಲಾಗಿದೆ. ಇಂಥ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದರು.
ಬಿ.ಕೆ. ಹರಿಪ್ರಸಾದ ಅವರನ್ನು ರಾಜ್ಯದಿಂದಲೇ ಬಹಿಷ್ಕರಿಸಬೇಕು. ಮೋದಿ ಮತ್ತು ರಾಹುಲ್ ನಡುವೆ ಭೂಮಿ ಮತ್ತು ಆಕಾಶದ ಅಂತರ ಇದೆ. ಶ್ರೀರಾಮ ಮತ್ತು ಹನುಮಂತನನ್ನು ಕಾಲ್ಪನಿಕ ಎಂದ ಕಾಂಗ್ರೆಸ್ ಪಕ್ಷದವರಿಗೆ ಶ್ರೀರಾಮನ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದರು.
ಜೆ.ಶಾಂತಾ ವೈಎಸ್‌ಆರ್ ಪಕ್ಷ ಸೇರಿರುವುದು ಅವರ ವೈಯಕ್ತಿಕ ವಿಚಾರ. ಅವರು ನನ್ನ ತಂಗಿಯೇ ಆಗಿದ್ದರೂ ಅವರು ಸ್ವತಂತ್ರವಾಗಿ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ನಾನೇನೂ ಒಂಟಿಯಾಗುವುದಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.ರಾಜ್ಯದಲ್ಲಿ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲ್ಲಲ್ಲಿದೆ ಎಂದರು.