ಒಳಮೀಸಲಾತಿ ಸಮೀಕ್ಷೆ: ವೈಜ್ಞಾನಿಕ ವರದಿ ನೀಡಿ

KannadaprabhaNewsNetwork | Published : May 5, 2025 12:51 AM

ಸಾರಾಂಶ

ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ವಿಶ್ಲೇಷಿಸಿ ಒಳ ಮೀಸಲಾತಿ ವರ್ಗೀಕರಣ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿ ಆಯೋಗ ಹೊಂದಿದೆ. ಈ ಉದ್ದೇಶಕ್ಕಾಗಿ ಸರ್ಕಾರ ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೈಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಕೋಲಾರಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ವರ್ಗೀಕರಣ ಕುರಿತಾದ ಸಮೀಕ್ಷೆ ಗಂಭೀರವಾಗಿ ಪರಿಗಣಿಸಿ, ಪ್ರತಿ ಮನೆಗೂ ತೆರಳಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಮತ್ತು ಕೋಲಾರ ತಾಲೂಕು ಒಳಮೀಸಲಾತಿ ಸಮೀಕ್ಷೆಯಲ್ಲಿ ವೈಜ್ಞಾನಿಕ ವರದಿ ನೀಡಬೇಕು ಎಂದು ಉಪ ವಿಭಾಗಾಧಿಕಾರಿ ಡಾ.ಮೈತ್ರಿ ತಿಳಿಸಿದರು.ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಆಯೋಗದ ಸೂಚನೆಯಂತೆ ಸಮೀಕ್ಷೆ ನಡೆಸುವ ಕಾರ್ಯಕ್ಕೆ ಇಲ್ಲಿನ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೇನರ್‌ಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ವಿಶ್ಲೇಷಿಸಿ ಒಳ ಮೀಸಲಾತಿ ವರ್ಗೀಕರಣ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿ ಆಯೋಗ ಹೊಂದಿದೆ. ಈ ಉದ್ದೇಶಕ್ಕಾಗಿ ಸರ್ಕಾರ ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೈಗೊಳ್ಳುತ್ತಿದೆ ಎಂದರು.ಯಾವುದೇ ಸಮಸ್ಯೆಗಳಿಗೆ ಎಡೆ ಮಾಡದಂತೆ ಸಮೀಕ್ಷೆ ನಡೆಸಬೇಕು. ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಹೆಚ್ಚಿದ್ದು ಎಲ್ಲ ಮನೆಗಳಿಗೂ ಭೇಟಿ ನೀಡಿ, ನಿಗದಿತ ನಮೂನೆಯಲ್ಲಿ ಕೇಳಲಾದ ಮಾಹಿತಿ ಸಂಗ್ರಹಿಸಬೇಕು. ಗಂಭೀರವಾಗಿ ಈ ಕಾರ್ಯ ಕೈಗೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಇನ್ನೊಂದು ಹಂತದ ತರಬೇತಿ ಹಾಗೂ ಮಾಕ್ ಟ್ರಯಲ್ ಇದ್ದು ಅಲ್ಲಿ ಸಮೀಕ್ಷೆದಾರರು ಯಾವುದೇ ರೀತಿಯ ಸಂದೇಹಗಳಿದ್ದರೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.ಮನೆ ಮನೆಗೆ ಭೇಟಿ ನೀಡಿ

ಜಿಲ್ಲಾ ತರಬೇತುದಾರ ನಾರಾಯಣಸ್ವಾಮಿ ಮಾತನಾಡಿ, ತರಬೇತು ಪಡೆದವರು ಸಮೀಕ್ಷಾ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಮತದಾರರ ಪಟ್ಟಿಯಲ್ಲಿರುವ ಮನೆ ಸಂಖ್ಯೆಗಳ ಆಧಾರದ ಮೇಲೆ ಭೇಟಿ ನೀಡಬೇಕು. ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಗುರುತಿಸಬೇಕು. ಯಾವ ದಿನದಂದು, ಯಾವ ಯಾವ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂಬ ಮಾಹಿತಿಯನ್ನು ಆದ? ಮಟ್ಟಿಗೆ ಮುಂಚಿತವಾಗಿಯೆ ಗೊತ್ತುಪಡಿಸಿಕೊಳ್ಳಬೇಕು’ ಎಂದರು.ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯವರ ಯಾವುದೇ ಮನೆಯನ್ನು ಬಿಡದೆ ಪ್ರತಿಯೊಂದು ಮನೆಗೆ ಭೇಟಿ ನೀಡಿ ಅಲ್ಲಿರುವ ಪ್ರತಿಯೊಂದು ಕುಟುಂಬದ ಸದಸ್ಯರ ಮಾಹಿತಿಯನ್ನು ಮೊಬೈಲ್‌ನಲ್ಲಿ ಭರ್ತಿ ಮಾಡಬೇಕು. ಸಮೀಕ್ಷೆ ನಡೆಸುವಾಗ ಸಮೀಕ್ಷೆ ಬ್ಲಾಕಿನ ಅಧಿಕೃತ ಭಾಗವಾಗಿರುವ ಯಾವುದೇ ಮನೆಯನ್ನು ಬಿಡಬಾರದು ಎಂದರು.

ಸಮೀಕ್ಷೆ ಉದ್ದೇಶ ತಿಳಿಸಿ

ಅಲ್ಲದೆ ಪ್ರತಿ ಕುಟುಂಬವನ್ನು ಭೇಟಿ ಮಾಡಿದಾಗ, ಪ್ರಶ್ನಾವಳಿಯನ್ನು ತುಂಬಲು ಆತುರಪಡಬಾರದು. ನಿಮ್ಮ ಭೇಟಿಯ ಉದ್ದೇಶದ ಬಗ್ಗೆ ಮಾಹಿತಿ ನೀಡುವವರಿಗೆ ಸಂಕ್ಷಿಪ್ತವಾಗಿ ತಿಳಿಸಿ ಪರಿಚಯ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ನಯನಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಸಹಾಯಕ ನಿರ್ದೇಶಕ ಚನ್ನಬಸಪ್ಪ, ನಗರಸಭೆ ಆಯುಕ್ತ ಪ್ರಸಾದ್ ಇದ್ದರು.

Share this article