ಚನ್ನಪಟ್ಟಣ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಮಕ್ಕಳಿಗೆ ಶಾಲಾ ದಿನಗಳಿಂದಲೆ ಕಲೆ ಸಾಹಿತ್ಯ, ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕು. ಆಗ ಮಾತ್ರ ಪಾಶ್ಚಿಮಾತ್ಯ ಸೆಳೆತಕ್ಕೆ ಸಿಲುಕಿ ನಲುಗುತ್ತಿರುವ ನಮ್ಮ ಸಂಸ್ಕೃತಿ ಉಳಿಸಲು ಸಾಧ್ಯ ಎಂದು ಶೀಲಾ ಯೋಗೇಶ್ವರ್ ಅಭಿಪ್ರಾಯಪಟ್ಟರು.
ಸಂಕ್ರಾಂತಿ ಹಬ್ಬದಂದು ಶಾಲೆಯ ಮಕ್ಕಳು ಜಾನಪದ, ಡೊಳ್ಳು ಕುಣಿತ, ಪೂಜಾ ಕುಣಿತ, ಮಾದಪ್ಪನ ಪದಗಳು, ಹಾಲಕ್ಕಿ ನೃತ್ಯದ ಮೂಲಕ ನಮ್ಮ ನೆಲದ ಕಲೆಯ ಪರಿಚಯವನ್ನು ಮಾಡಿಕೊಟ್ಟಿದ್ದು ಅತ್ಯಂತ ಸಂತಸದ ಸಂಗತಿ, ಅರ್ಥವಿಲ್ಲದ ಹಾಡುಗಳಿಗೆ ಹೆಜ್ಜೆ ಹಾಕುವ ಬದಲು ಇಂತಹ ಮನಮುಟ್ಟುವ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟ ಮಕ್ಕಳಿಗೆ ಎಷ್ಟು ಅಭಿನಂದನೆ ಸಲ್ಲಿಸಿದರು ಸಾಲದು ಎಂದರು.
ಮಾಜಿ ಶಾಸಕ ಎಂ.ಸಿ.ಆಶ್ವಥ್, ಸಮಾಜ ಸೇವಕ ಚಕ್ಕಲೂರು ಕೃಷ್ಣಪ್ಪ, ಎಂ.ಕೆ.ದೊಡ್ಡಿ ಠಾಣೆಯ ಸಹನಾ ಪಾಟೀಲ್, ರಾಂಪುರ ಗ್ರಾಪಂ ಅಧ್ಯಕ್ಷ ಕನ್ನಮಂಗಲ ಯೋಗೇಶ್, ಬಾಳೇನಹಳ್ಳಿ ರಾಜಶೇಖರ್, ಮಂಜುನಾಥ್, ಹಿಂದೂ ಜಾಗರಣ ವೇದಿಕೆಯ ಶಾ.ನಾಗರಾಜು, ಗ್ರಾಪಂ ಸದಸ್ಯ ಸಿದ್ದಾಚಾರ್, ಸಾಧನಾ ಸಂಸ್ಥೆಯ ಮುಖ್ಯಸ್ಥೆ ಸಾಧನಶ್ರೀ, ಸಂಕೇತ್ ನಾಯಕ್, ಶಾಲೆಯ ಮುಖ್ಯಶಿಕ್ಷಕ ಚನ್ನವೀರಪ್ಪ ಸೇರಿದಂತೆ ಹಲವರು ಹಾಜರಿದ್ದರು.ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ವಿವಿಧ ಬಗೆಯ ನೃತ್ಯಗಳನ್ನು ನಡೆಸಿಕೊಟ್ಟರು. ಶಾಲಾ ಆವರಣದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರು ತಮ್ಮ ರಾಸುಗಳನ್ನು ಆಲಂಕರಿಸಿ ಕರೆತಂದಿದ್ದು, ರೈತರು ತಾವೂ ಬೆಳೆದ ಬೆಳೆಗಳನ್ನು ಸ್ಥಳದಲ್ಲೆ ಮಾರಾಟ ಮಾಡುತಿದ್ದರು. ಮಕ್ಕಳೆ ಮಾಡಿದಂತಹ ರಾಗಿಯ ಕಣ, ರಂಗೋಲಿ ಚಿತ್ರಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತ್ತು.
ಪೋಟೊ೧೩ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಕಣ್ವ ಬಳಿಯ ಸಾಧನ ವಿದ್ಯಾಲಯದಲ್ಲಿ ನಡೆದ ಸಾಧನ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು.