ಹಂಪಿಯ ಗತವೈಭವ ಜಾಗತಿಕ ಮಟ್ಟದಲ್ಲಿ ಪರಿಚಯಿಸಿ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

KannadaprabhaNewsNetwork |  
Published : Jun 21, 2026, 02:30 AM IST
ಫೋಟೋವಿವರ- (16ಎಚ್‌ಪಿಟಿ2) ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರವಾಸಿ ಮಾರ್ಗದರ್ಶಿಗಳಿಗೆ ವಿದೇಶ ಭಾಷಾ ತರಬೇತಿ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಉದ್ಘಾಟಿಸಿದರು | Kannada Prabha

ಸಾರಾಂಶ

ವಿದೇಶಿ ಪ್ರವಾಸಿಗರು ಜಿಲ್ಲೆಗೆ ಬಂದಾಗ ಸ್ಥಳೀಯವಾಗಿ ಅವರಿಗೆ ಮೊದಲು ಸಿಗುವುದೇ ಮಾರ್ಗದರ್ಶಿಗಳು.

ಹೊಸಪೇಟೆ: ಪ್ರವಾಸೋದ್ಯಮ ಇಲಾಖೆಯು ಮಾರ್ಗದರ್ಶಿಗಳ ಕಲ್ಯಾಣಕ್ಕೆ ಸದಾ ಬದ್ಧವಾಗಿದೆ. ವಿದೇಶ ಭಾಷಾ ತರಬೇತಿ ಕಾರ್ಯಾಗಾರ ಸದುಪಯೋಗ ಪಡಿಸಿಕೊಂಡು ವಿಜಯನಗರ ಸಾಮ್ರಾಜ್ಯದ ಗತವೈಭವ, ಹಂಪಿಯ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕರೆ ನೀಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಭುವನವಿಜಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರವಾಸಿ ಮಾರ್ಗದರ್ಶಿಗಳಿಗೆ ವಿದೇಶ ಭಾಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದೇಶಿ ಪ್ರವಾಸಿಗರು ಜಿಲ್ಲೆಗೆ ಬಂದಾಗ ಸ್ಥಳೀಯವಾಗಿ ಅವರಿಗೆ ಮೊದಲು ಸಿಗುವುದೇ ಮಾರ್ಗದರ್ಶಿಗಳು. ನಿಮ್ಮ ನಡವಳಿಕೆ, ಪ್ರಾಮಾಣಿಕತೆ ಮತ್ತು ಆತ್ಮೀಯತೆ ಈ ನೆಲ, ಜಲ, ಭಾಷೆ ಮತ್ತು ದೇಶದ ಮೇಲಿನ ಗೌರವವನ್ನು ನಿರ್ಧರಿಸುತ್ತದೆ. ಪ್ರವಾಸಿಗರ ಸುರಕ್ಷತೆ ಮತ್ತು ನಂಬಿಕೆಗೆ ದ್ರೋಹವಾಗದಂತೆ ವೃತ್ತಿಪರತೆ ಕಾಯ್ದುಕೊಳ್ಳಬೇಕು. ವಿದೇಶಿಗರು ಎಂಬ ಕಾರಣಕ್ಕೆ ಅವರಿಂದ ಹೆಚ್ಚಿನ ಹಣ ವಸೂಲಿ ಮಾಡುವುದು ಅಥವಾ ಅನುಚಿತವಾಗಿ ವರ್ತಿಸುವುದು ಮಾಡಬಾರದು. ಹಂಪಿಯ ವಿಜಯನಗರ ಸಾಮ್ರಾಜ್ಯದ ಕಲೆ, ವಾಸ್ತುಶಿಲ್ಪ, ಇತಿಹಾಸ ಮತ್ತು ಸಂಸ್ಕೃತಿ ವಿವರಿಸುವಾಗ ಯಾವುದೇ ಕಾಲ್ಪನಿಕ ಕಥೆಗಳಿಗೆ ಆಸ್ಪದ ನೀಡಬಾರದು ಎಂದರು.

ಸಂಶೋಧನಾಧಾರಿತ ಮತ್ತು ಅಧಿಕೃತ ಇತಿಹಾಸವನ್ನು ಮಾತ್ರ ಪ್ರವಾಸಿಗರಿಗೆ ತಲುಪಿಸಬೇಕು. ಹಂಪಿಗೆ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ರಷ್ಯನ್ ಸೇರಿದಂತೆ ವಿವಿಧ ದೇಶಗಳ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಅವರದ್ದೇ ಭಾಷೆಯಲ್ಲಿ ಇಲ್ಲಿನ ವೈಭವವನ್ನು ಮನಮುಟ್ಟುವಂತೆ ವಿವರಿಸಿದಾಗ ಪ್ರವಾಸದ ಸಾರ್ಥಕತೆ ಹೆಚ್ಚುತ್ತದೆ. ಈ ತರಬೇತಿಯನ್ನು ಕೇವಲ ಉದ್ಯೋಗದ ದೃಷ್ಟಿಯಿಂದ ನೋಡದೆ, ಜ್ಞಾನಾರ್ಜನೆಯಾಗಿ ಬಳಸಿಕೊಳ್ಳಿ ಎಂದು ಅವರು ಹೇಳಿದರು.

ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರಿಗೆ ನಮ್ಮ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಪ್ರವಾಸಿ ಮಾರ್ಗದರ್ಶಿಗಳು ಕೇವಲ ಮಾಹಿತಿ ನೀಡುವವರಲ್ಲ, ಬದಲಿಗೆ ಅವರು ನಮ್ಮ ದೇಶದ ಸಾಂಸ್ಕೃತಿಕ ರಾಯಭಾರಿಗಳು. ಇದರಿಂದ ಸ್ಥಳೀಯ ಮಾರ್ಗದರ್ಶಿಗಳ ಆರ್ಥಿಕ ಮಟ್ಟ ಸುಧಾರಿಸುವುದರ ಜೊತೆಗೆ ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಜಿಲ್ಲೆಯ ಖ್ಯಾತಿ ಮತ್ತಷ್ಟು ಹೆಚ್ಚಲಿದೆ ಎಂದರು.

ಬದಲಾಗುತ್ತಿರುವ ಡಿಜಿಟಲ್ ಯುಗಕ್ಕೆ ತಕ್ಕಂತೆ ಮಾರ್ಗದರ್ಶಿಗಳು ಕೇವಲ ಭಾಷೆಯನ್ನಷ್ಟೇ ಅಲ್ಲದೆ, ಡಿಜಿಟಲ್ ಪೇಮೆಂಟ್, ಆನ್‌ಲೈನ್ ಬುಕಿಂಗ್ ಮತ್ತು ಪ್ರವಾಸಿ ಆಪ್‌ಗಳ ಬಳಕೆಯ ಬಗ್ಗೆಯೂ ಮಾಹಿತಿ ಹೊಂದಿರಬೇಕು. ಪ್ರವಾಸೋದ್ಯಮ ಇಲಾಖೆಯು ಮಾರ್ಗದರ್ಶಿಗಳ ಕಲ್ಯಾಣಕ್ಕೆ ಸದಾ ಬದ್ಧವಾಗಿದೆ. ಈ ತರಬೇತಿಯ ಸದುಪಯೋಗ ಪಡಿಸಿಕೊಂಡು ಹಂಪಿಯ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಜಿಲ್ಲಾಧಿಕಾರಿಗಳು ಹೇಳಿದರು.

ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಡಾ.ಎಸ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಹಂಪಿ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಸಭೆಯಲ್ಲಿ ಮಾತನಾಡಿದರು.

ಹೈದ್ರಾಬಾದ್ ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ತಾರಕೇಶ್ವರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಹಂಪಿ ಕನ್ನಡ ವಿವಿಯ ಕುಲಸಚಿವ ವಿರೂಪಾಕ್ಷ ಪೂಜಾರಹಳ್ಳಿ, ಹಂಪಿ ವಿವಿಯ ವಿದೇಶಿ ಭಾಷಾ ಸಂಚಾಲಕ ಎಸ್.ವೈ. ಸೋಮಶೇಖರ್ ಸೇರಿದಂತೆ ವಿವಿಧ ಜಿಲ್ಲೆಯ ಪ್ರವಾಸಿ ಮಾರ್ಗದರ್ಶಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪಯೋಗ ಮಾಡದೆ ಪಾಳಬಿದ್ದ ಶೌಚಾಲಯಗಳು
ಭಟ್ಕಳ ಜಲದುರಂತದ ಸಂತ್ರಸ್ತ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ