ಮರಿಯಮ್ಮನಹಳ್ಳಿ: ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾದ ನಾರಾಯಣದೇವರಕೆರೆಯು ಈ ಹಿಂದೆ ಸಕಲ ಸಮೃದ್ಧಿಯಿಂದ ಮೆರೆದ ಊರಿನ ಗತವೈಭವ ಮತ್ತು ಮಹತ್ವದ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಅವಶ್ಯಕವಾಗಿದೆ ಎಂದು ಹಿರಿಯ ವೈದ್ಯ ಡಾ.ಬಿ. ಅಂಬಣ್ಣ ಹೇಳಿದರು.
ನಾರಾಯಣದೇವರಕೆರೆಯು 9 ಅಕ್ಷರಗಳನ್ನು ಹೊಂದಿರುವ ಊರಾಗಿದೆ. ಈ ಊರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಾಮಂತರ ಆಳ್ವಿಕೆಯಲ್ಲಿ ಅತ್ಯಂತ ವೈಭವದೊಂದಿಗೆ ಮೆರೆದಿತ್ತು. ಸಾಕಷ್ಟು ಸಮೃದ್ಧಿ ಹೊಂದಿರುವ ಊರು ತುಂಗಭದ್ರಾ ಜಲಾಶಯದ ನಿರ್ಮಾಣದಲ್ಲಿ ಅಲ್ಲಿನ ಜನರು ತಮ್ಮ ಮನೆ, ಆಸ್ತಿ ಎಲ್ಲವನ್ನೂ ಬಿಟ್ಟು ಮರಿಯಮ್ಮನಹಳ್ಳಿ ಸೇರಿದಂತೆ ಇತರೆ ಊರುಗಳಿಗೆ ಅಲ್ಲಿನ ಜನರು ಚದುರಿ ಹೋಗಿದ್ದಾರೆ. ನಾರಾಯಣದೇವರಕೆರೆಯ ಕಲೆ, ಸಂಸ್ಕೃತಿ, ಪರಂಪರೆಯನ್ನು ಮರಿಯಮ್ಮನಹಳ್ಳಿಯ ಜನರು ಮುಂದುವರೆಸಿಕೊಂಡು ಬಂದಿರುವುದರಿಂದ ನಾಣಿಕೇರಿ ಉತ್ಸವದಲ್ಲಿ ಅಂದು ಕಂಡು ಬರುತ್ತಿದೆ ಎಂದರು.
ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಸ್ಥಳೀಯ ಮುಖಂಡ ಎಸ್.ಕೃಷ್ಣ ನಾಯ್ಕ್ ಮಾತನಾಡಿದರು.ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಚಿದ್ರಿ ಸತೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಸಭೆಯಲ್ಲಿ ಮಾತನಾಡಿದರು. ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎ.ರೆಹಮಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಹಾಂತೇಶ್ ನೆಲ್ಲುಕುದಿರೆ, ತಂಡದವರು ಪ್ರಾರ್ಥಿಸಿದರು. ಪಿ.ರಾಮಚಂದ್ರ ಸ್ವಾಗತಿಸಿದರು. ಆಕಾಶ್ ಪೂಜಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ವಂದಿಸಿದರು. ಬಿ.ಪರಶುರಾಮ ನಿರೂಪಿಸಿದರು.
ನಂತರ ಸ್ಥಳೀಯ ಕಲಾವಿದರಿಂದ ಮತ್ತು ಖಾಸಿಂ ಈವೆಂಟ್ಸ್ ನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.