ಕನ್ನಡದ ಮೇಲೆ ಅನ್ಯ ಭಾಷೆಗಳ ಆಕ್ರಮಣ

KannadaprabhaNewsNetwork |  
Published : Apr 16, 2026, 02:30 AM IST
ಅಳ್ನಾವರ ತಾಲೂಕು 5ನೇ ಸಮ್ಮೇಳನವನ್ನು ಶಂಕರ ಹಲಗತ್ತಿ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಈಗಾಗಲೆ 20 ಸಾವಿರ ಕನ್ನಡ ಶಾಲೆಗಳು ಮುಚ್ಚಿವೆ. ಈ ವರ್ಷ 1500 ಕನ್ನಡ ಶಾಲೆ ಮುಚ್ಚುವ ಸಾಧ್ಯತೆ ಇದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡದೆ ಅವುಗಳನ್ನು ಮುಚ್ಚುವಂತಹ ವ್ಯವಸ್ಥೆ ನಿರ್ಮಾಣವಾಗಿದೆ.

ಅಳ್ನಾವರ:

ಕನ್ನಡದ ಮೇಲೆ ಇಂಗ್ಲಿಷ್‌, ಹಿಂದಿ ಭಾಷೆ ಜತೆಗೆ ಗಡಿಯಲ್ಲಿ ನೆರೆ ರಾಜ್ಯದ ಭಾಷೆಗಳ ಆಕ್ರಮಣ ನಿತ್ಯ ನಡೆಯುತ್ತಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ಪಟ್ಟಣದ ಉಮಾಭವನದಲ್ಲಿ ಜರುಗಿದ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮೇಳನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೆ 20 ಸಾವಿರ ಕನ್ನಡ ಶಾಲೆಗಳು ಮುಚ್ಚಿವೆ. ಈ ವರ್ಷ 1500 ಕನ್ನಡ ಶಾಲೆ ಮುಚ್ಚುವ ಸಾಧ್ಯತೆ ಇದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡದೆ ಅವುಗಳನ್ನು ಮುಚ್ಚುವಂತಹ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸರ್ಕಾರವೇ ಮುಂದೆ ನಿಂತು ಪಬ್ಲಿಕ್ ಶಾಲೆ ತೆರೆಯುವ ಮೂಲಕ ಸುತ್ತಲಿನ ಕನ್ನಡ ಶಾಲೆ ಮುಚ್ಚುತ್ತಿರುವುದು ಕನ್ನಡಿಗರಿಗೆ ಸಂಕಟದ ಸಂಗತಿಯಾಗಿದ್ದು ಸಾಹಿತಿಗಳು, ಚಿಂತಕರು, ಕನ್ನಡಿಗರು ಸರ್ಕಾರದ ಕಿವಿ ಹಿಂಡಬೇಕಿದೆ. ಈ ವ್ಯವಸ್ಥೆಯ ಹಿಂದೆ ಬಡವರ, ದೀನ-ದಲಿತರ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿಸುವ ದೊಡ್ಡ ಹುನ್ನಾರ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕನ್ನಡ ಸಂಸ್ಕೃತಿಯೇ ನಾಶವಾಗುತ್ತದೆ. ಪಬ್ಲಿಕ್ ಶಾಲೆಗಳಿಗೆ ಮಾಡುವ ಖರ್ಚನ್ನು ಸರ್ಕಾರಿ ಶಾಲೆಗಳಿಗೆ ಖರ್ಚು ಮಾಡಬೇಕಿದೆ ಎಂದರು.

ಕನ್ನಡ ಅನ್ನದ ಭಾಷೆಯಾದಾಗ ಮಾತ್ರ ನಾವು ಇಂಗ್ಲಿಷ್‌ ವ್ಯಾಮೋಹ ಬಿಡಲು ಸಾಧ್ಯ. ನಮ್ಮ ಮಕ್ಕಳಿಗೆ ಆಂಗ್ಲ ಭಾಷೆಯ ರುಚಿ ತೊರಿಸುತ್ತಾ ನಮ್ಮ ಕನ್ನಡ ಭಾಷೆಯನ್ನೇ ಪೂರ್ಣವಾಗಿ ಕಲಿಸುತ್ತಿಲ್ಲ. ಇಂಗ್ಲಿಷ್‌ ಭಾಷೆ ನಮ್ಮಲ್ಲಿ ಸಾಂಕ್ರಾಮಿಕ ರೋಗವಾಗಿ ಬೆಳೆದು ಬಿಟ್ಟಿದೆ. ಈ ರೀತಿಯ ಬೆಳವಣಿಗೆ ಮುಂದುವರಿದರೆ ಕನ್ನಡ ಮುಂದೊಂದಿನ ಕೇವಲ ಮನೆಯ ಭಾಷೆಯಾಗಿ ಉಳಿಯುತ್ತದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬಿಳಕಿ-ಅವರೊಳ್ಳಿಯ ಚನ್ನಬಸವ ದೇವರು ಸ್ವಾಮೀಜಿ ಆಶೀವರ್ಚನ ನೀಡಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲು ಎಲ್ಲರೂ ಶ್ರಮಿಸಬೇಕು. ನಿಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಬೇಕು ಮತ್ತು ಹಳ್ಳಿಗಳಲ್ಲಿ ಕೂಡಾ ಕನ್ನಡದ ಭಾಷೆ ಮಾರ್ದನಿಸಬೇಕು. ಕನ್ನಡದ ತೇರು ಎಳೆಯಲು ಎಲ್ಲರೂ ಟೊಂಕ ಕಟ್ಟಿ ನಿಲ್ಲಬೇಕು ಎಂದರು.

ಸಮ್ಮೇಳನದಲ್ಲಿ ರಾಷ್ಟ್ರಧ್ವಜವನ್ನು ಮಾಜಿ ಸೈನಿಕ ಅಜಪ್ಪ ಕುರುಬರ, ನಾಡಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಸಾಹಿತ್ಯ ಪರಿಷತ್‌ ಧ್ವಜವನ್ನು ಕಸಾಪ ತಾಲೂಕಾಧ್ಯಕ್ಷ ಗುರುರಾಜ ಸಬ್ನಿಸ ಧ್ವಜಾರೋಹಣ ಮಾಡಿದರು. ಬಿ.ಎಂ. ಕಾಪೋಲಕರ ಬರೆದ " ಮೆಚ್ಚಿ ಬರೆದೆನು " ಪುಸ್ತಕ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಕಸಾಪ ತಾಲೂಕ ಘಟಕದ ಅಧ್ಯಕ್ಷ ಗುರುರಾಜ ಸಬನೀಸ್, ತಾಪಂ ಇಒ ಪ್ರಶಾಂತ ತುರ್ಕಾಣಿ, ಎ.ಎಂ. ಮಂಗಳಗಟ್ಟಿ, ಅಜ್ಜಪ್ಪ ಕುರುಬರ, ಎಸ್.ಬಿ. ಪಾಟೀಲ, ವಿನಾಯಕ ಕುರುಬರ, ಬಸವರಾಜ ಯದ್ದಲಗುಡ್ಡ, ಪ್ರಕಾಶ ಮುಗದಮು, ನಿಂಗಪ್ಪ ಬೇಕ್ವಾಡಕರ, ಶ್ರೀಕಾಂತ ಗಾಯಕವಾಡ, ಐ.ಬಿ. ಶೀವಂತರಮಠ, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಎಚ್.ಎ. ಕೊಚ್ಚರಗಿ, ಸರಸ್ವತಿ ಮೂಡಬಾಗಿಲ, ತೈಯಬ್ ಮೌಲಾನಾ, ಬಾಬಾಜಾನ ಮುಲ್ಲಾ, ಅಮೋಲ ಗುಂಜೀಕರ, ನದೀಮ ಕಾಂಟ್ರ್ಯಾಕ್ಟರ್‌, ಹಸನಅಲಿ ಶೇಖ, ಎಂ.ಎಂ. ತೇಗೂರ. ಶಶಿಧರ ಇನಾಮದಾರ್‌, ಶಿವಾನಂದ ಬಾವಿಕಟ್ಟಿ, ಜಯಶ್ರೀ ಉಡುಪಿ, ಸುಮಾ ಸೊಪ್ಪಿ, ವಿ.ಎಸ್. ಕೌಜಲಗಿ, ವೀರಣ್ಣ ವಡ್ಡಿನ್, ಪ್ರವೀಣ ಪವಾರ ಏಕನಾಥ ಶಿಂಪಿ ಇದ್ದರು. ಬಾಕ್ಸ್‌...

ಭಾಷಾ ಸಂಸ್ಕೃತಿ ರಕ್ಷಣೆಗೆ ಪ್ರಾಮುಖ್ಯತೆ ನೀಡಲು ಸಾಹಿತ್ಯ ಸಮ್ಮೇಳನ ಒತ್ತು ನೀಡುವ ಜತೆಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಅಗತ್ಯವಿದೆ ಎಂದು ಸಮ್ಮೇಳನಾಧ್ಯಕ್ಷ ಡಾ ಬಸವರಾಜ ಮೂಡಬಾಗಿಲ್ ಹೇಳಿದರು. ಗಡಿನಾಡ ಹಾಗೂ ಹೊರನಾಡ ಕನ್ನಡಿಗರ ಸಮಸ್ಯೆಗಳತ್ತ ಸರ್ಕಾರ ವಿಶೇಷ ಗಮನ ಹರಿಸಬೇಕೆಂದು ಆಗ್ರಹಿಸಿದರು. ಅಳ್ನಾವರದ ಇತಿಹಾಸ, ಭೌಗೋಳಿಕ ವೈಶಿಷ್ಟ್ಯತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಸ್ಮರಿಸಿದ ಅವರು, ಇಲ್ಲಿ ವಿವಿಧ ಭಾಷೆಗಳ ಜನರು ಸೌಹಾರ್ದದಿಂದ ಬದುಕುತ್ತಿರುವುದನ್ನು ಪ್ರಶಂಸಿದರು. ಕನ್ನಡ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗೆ ಸ್ಥಳೀಯರ ಸಹಕಾರದ ಅಗತ್ಯವಿದೆ ಎಂದರು. ಯುವ ಕವಿಗಳು ಮತ್ತು ಸಾಹಿತ್ಯಾಸಕ್ತರು ನಾಡು-ನುಡಿ-ಸಂಸ್ಕೃತಿ ಪ್ರತಿಬಿಂಬಿಸುವ ಸೃಜನಾತ್ಮಕ ಕೃತಿ ರಚಿಸಬೇಕು. ಸಮಾಜದಲ್ಲಿ ಶಾಂತಿ, ಮಾನವೀಯ ಮೌಲ್ಯ ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.

ನಿರ್ಣಯಗಳು

೧. ಅಳ್ನಾವರ ಪಟ್ಟಣದಲ್ಲಿ ಸಾಹಿತ್ಯ ಭವನದ ನಿರ್ಮಾಣ ಆಗಬೇಕು೨. ಗಡಿಭಾಗದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು.೩. ಮರಾಠಿ ಮಾತನಾಡುವವರು ಕನ್ನಡ ಭಾಷೆ ಕಲಿಯಲು ಮುಂದಾಗುವಂತೆ ಪ್ರೇರೇಪಿಸಲು ಕನ್ನಡ ಕಲಿಕಾ ಕೇಂದ್ರ ತೆರೆಯಬೇಕು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮದು: ಚಂದ್ರಶೇಖರ ನರಸಿಂಹ ಹೆಗಡೆ
ಕಾಟಾಚಾರಕ್ಕೆ ಮರುಪರಿಶೀಲನೆ ಪ್ರಕ್ರಿಯೆ: ಡಾ. ನಾಗೇಶ ನಾಯ್ಕ ಕಾಗಾಲ ಆರೋಪ