ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನಲ್ಲಿ ಬಿತ್ತನೆಬೀಜ, ರಸಗೊಬ್ಬರ, ಔಷಧಗಳ ಮಾರಾಟ ಮಳಿಗೆಗಳಿಗೆ ಕೃಷಿ ಸಹಾಯಕ ನಿರ್ದೇಶಕ ವಿಶ್ವನಾಥ್ ಹಾಗೂ ತಂಡದವರು ಭೇಟಿ ನೀಡಿ ದಾಸ್ತಾನು ಕುರಿತು ಪರಿಶೀಲನೆ ನಡೆಸಿದರು.
ತಾಲೂಕಿನ ರೈತರು ಯಾವುದೇ ಕಾರಣಕ್ಕೂ ಬಿಡಿಯಾಗಿ ಬಿತ್ತನೆ ಬೀಜಗಳನ್ನು ಖರೀದಿಸಬಾರದು. ಅಧಿಕೃತ ಮಾರಾಟಗಾರರಿಂದಲೇ ಬಿಲ್ಲುಗಳನ್ನು ಪಡೆದು ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಕೃಷಿಗೆ ಬಳಕೆ ಮಾಡಬೇಕು. ಅನಧಿಕೃತ ಲೂಸ್ ಬಿತ್ತನೆ ಬೀಜ ದಾಸ್ತಾನು ಹಾಗೂ ಮಾರಾಟ ಮಾಡುವವರು ಕಂಡುಬಂದಲ್ಲಿ ತಕ್ಷಣ ತಾಲೂಕು ಕೃಷಿ ಸಹಾಯಕ ನಿರ್ದೇಶಕರು ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಲು ತಿಳಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಆರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆಬೀಜ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ರೈತರು ಎಫ್.ಐ.ಡಿ, ಮತ್ತು ಆಧಾರ್ ಕಾರ್ಡ್‌ಗಳ ವಿವರ ನೀಡಿ ಅವಶ್ಯವಿರುವ ರಸಗೊಬ್ಬರ ಪಡೆಯಬಹುದಾಗಿದೆ. ಅವಳಿ ತಾಲೂಕಿನಲ್ಲಿ ರೈತರು ಮೆಕ್ಕೆಜೋಳ ಬದಲಾಗಿ ರಾಗಿ, ಜೋಳ, ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಹಾಗೂ ನೈಸರ್ಗಿಕ ಕೃಷಿಯೊಂದಿಗೆ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸೂಚಿಸಿದರು.- - -
-22ಎಚ್.ಎಲ್.ಐ3ಎ: