ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ತನಿಖೆ ಮಾಡಿ

KannadaprabhaNewsNetwork | Published : Feb 11, 2025 12:45 AM

ಸಾರಾಂಶ

ಅಫಜಲಪುರ ಮತಕ್ಷೇತ್ರದಲ್ಲಿ 2200 ಮನೆಗಳ ಮಂಜೂರಾಗಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆಯಬೇಕು ಎಂದು ಜನ ಕರ್ನಾಟಕ ಫರಹತಾಬಾದ ವಲಯ ಅಧ್ಯಕ್ಷ ಡಾ. ಶಿವಕುಮಾರ ಶರ್ಮಾ ಒತ್ತಾಯಿಸಿದ್ದಾರೆ.

ಚವಡಾಪುರ: ಅಫಜಲಪುರ ಮತಕ್ಷೇತ್ರದಲ್ಲಿ 2200 ಮನೆಗಳ ಮಂಜೂರಾಗಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆಯಬೇಕು ಎಂದು ಜನ ಕರ್ನಾಟಕ ಫರಹತಾಬಾದ ವಲಯ ಅಧ್ಯಕ್ಷ ಡಾ. ಶಿವಕುಮಾರ ಶರ್ಮಾ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಫರಹತಾಬಾದನಲ್ಲಿ ಇತ್ತೀಚಿಗೆ ಶಾಸಕ ಎಂ.ವೈ ಪಾಟೀಲ್ ವಸತಿ ವಂಚಿತರ ಕುರಿತು ಸಭೆ ನಡೆಸುತ್ತಿದ್ದಾಗ ಅಫಜಲಪುರ ಮತಕ್ಷೇತ್ರದ 13 ಗ್ರಾಪಂಗಳಲ್ಲಿ 2200 ಮನೆಗಳು ಮಂಜೂರಾಗಿವೆ. ಇದು ಹೇಗೆ ಸಾಧ್ಯ? ಉಳಿದವರೇನು ಮಾಡಬೇಕು ಎಂದು ಕೇಳಿದಾಗ ಇಷ್ಟು ಪ್ರಮಾಣದ ಮನೆಗಳ ಮಂಜೂರಾಗಿದ್ದೇ ತಮಗೆ ಗೊತ್ತಿಲ್ಲ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ.

ಶಾಸಕರು ನಾಮಕೇವಾಸ್ತೆ ಆಗಿದ್ದು ಇವರ ಅಧಿಕಾರ ಬೇರೆ ಯಾರೋ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆನ್ನುವುದು ಸ್ಪಷ್ಟವಾಗಿದೆ. ನೂರಾರು ಜನ ಭಾಗಿಯಾಗಿರುವ ಸಭೆಯಲ್ಲಿ ಸ್ವತಃ ಶಾಸಕರೇ ಒಪ್ಪಿಕೊಂಡಂತೆ ತಾಲೂಕಿಗೆ ಯಾರು ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೋ ಗೊತ್ತಿಲ್ಲ, ಫರಹತಾಬಾದ್ ವಲಯದ ಪಂಚಾಯಿತಿಗಳಿಗೆ ಮನೆಗಳು ಯಾಕೆ ರದ್ದಾದವು ಎನ್ನುವುದು ಅವರಿಗೆ ಗೊತ್ತಿಲ್ಲ ಎನ್ನುವುದನ್ನು ಕೂಡ ಒಪ್ಪಿಕೊಂಡಿದ್ದಾರೆ. ಅಲ್ಲದೆ ಶಾಸಕರ ಲೇಟರ್‌ ಪ್ಯಾಡ್ ಯಾರು ಬೇಕಾದರು ಬಳಸಿಕೊಳ್ಳುತ್ತಾರೆ. ಶಾಸಕರು ಖಾಲಿ ಲೇಟರ್‌ಪ್ಯಾಡ್‌ನಲ್ಲಿ ಸಹಿ ಮಾಡಿಕೊಡುವ ರೂಢಿ ಬೆಳೆಸಿಕೊಂಡಿದ್ದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಜವಾಬ್ದಾರಿ ಇರುವ ಶಾಸಕರೇ ಹೀಗೆ ಮಾಡಿದಾಗ ಜನಸಾಮಾನ್ಯರ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.

ವಸತಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದ ಬಗ್ಗೆ ತನಿಖೆ ಆಗಬೇಕು, ರಾಜ್ಯದ, ದೇಶದ ಪ್ರತಿಯೊಂದ ವಿಚಾರದಲ್ಲೂ ಮೂಗು ತೂರಿಸುವ ಸಚಿವ ಪ್ರಿಯಾಂಕ್ ಖರ್ಗೆ ಈ ವಿಚಾರದ ಕುರಿತು ಮಾತನಾಡಬೇಕು ಎಂದರು.

ಅಣವೀರ ಬೆಳಗುಂಪಾ, ಎ ಎಸ್ ಮಲ್ಲಿಕಾರ್ಜುನ ಸಾಮ್ರಾಟ್, ಶರಣಬಸಪ್ಪ ಬಿದನೂರ, ರವಿ ಹಾಳಕಾಯಿ, ಉಮೇಶ ಗುಡೂರ, ಅಂಬರೀಷ್ ಮಣ್ಣೂರ, ಸಿದ್ಧರಾಮ ಮೋಟಗಿ, ರವಿ ಮಾಲಗತ್ತಿ, ಅಭಿಷೇಕ್ ಭಂಕೂರ, ಸಾಗರ ಅಂಗಡಿ, ರಸೂಲ್ ಸಾಬ್ ಭಂಕೂರ, ಬಸವಶಟ್ಟಿ ಮಹಾಶಟ್ಟಿ, ಮಲ್ಲಿಕಾರ್ಜುನ ಸಿ ಎಂ., ಸಾಗರ್ ಮಾಲಗತ್ತಿ, ಅಂಬರೀಷ್ ಭಂಕೂರ ಭಾಗವಹಿಸಿದ್ದರು.

Share this article