ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗಾಗಿ ಹಾಸನ ನಗರದ ಸಂಸದರ ನಿವಾಸಕ್ಕೆ ಶುಕ್ರವಾರ ಬೆಂಗಳೂರಿನಿಂದ ಕರೆತಂದು ಸ್ಥಳ ಮಹಜರು ನಡೆಸಿದರು.
ಹಾಸನ
ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗಾಗಿ ಹಾಸನ ನಗರದ ಸಂಸದರ ನಿವಾಸಕ್ಕೆ ಶುಕ್ರವಾರ ಬೆಂಗಳೂರಿನಿಂದ ಕರೆತಂದು ಸ್ಥಳ ಮಹಜರು ನಡೆಸಿದರು. ತನಿಖೆ ನಂತರ ಹೊರಡುವಾಗ ಪ್ರಜ್ವಲ್ ರೇವಣ್ಣ ಅವರು ತಲೆ ಬಗ್ಗಿಸಿಕೊಂಡು ಜೀಪ್ ಹತ್ತಿದರು. ಇದರಿಂದ ಪ್ರಜ್ವಲ್ ನೋಡಲು ಕಾಂಪೌಂಡ್ ಹೊರಗೆ ನಿಂತಿದ್ದ ಜೆಡಿಎಸ್ ಕಾರ್ಯಕರ್ತರಿಗೆ ನಿರಾಸೆ ಉಂಟಾಯಿತು.
ಹಾಸನ ನಗರದ ಆರ್.ಸಿ. ರಸ್ತೆ ಎಸ್ಪಿ ಕಚೇರಿ ಪಕ್ಕದಲ್ಲೆ ಇರುವ ಸಂಸದರ ನಿವಾಸದಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಲೋಕಸಭಾ ಸದಸ್ಯರಾಗಿದ್ದಾಗ ಸಂಸದರ ನಿವಾಸದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಸಂತ್ರಸ್ತ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನೀಡಿದ ದೂರಿನ ಆಧಾರದ ಮೇರೆಗೆ ಕರೆತಂದು ಸುಮಾರು ೪ ಗಂಟೆಗಳ ಕಾಲ ಸ್ಥಳ ಪರಿಶೀಲನೆ ಮಾಡಲಾಯಿತು. ಇದೇ ಪ್ರಕರಣದಲ್ಲಿ ಹಾಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್‌ರನ್ನು ಬಾಡಿ ವಾರೆಂಟ್ ಪಡೆದು ಇಲ್ಲಿಗೆ ಕರೆತಲಾಗಿತ್ತು. ತನಿಖಾ ತಂಡದ ಜೊತೆಗೆ ಎಫ್‌ಎಸ್‌ಎಲ್ ತಂಡವೂ ನಿವಾಸದ ವಿವಿಧೆಡೆ ಅವಲೋಕನ ನಡೆಸಿತು. ಈ ವೇಳೆ ಪ್ರಜ್ವಲ್‌ರಿಂದ ಹೇಳಿಕೆ ಪಡೆಯಿತು. ಅಲ್ಲದೆ ಪಂಚರ ಸಮ್ಮುಖದಲ್ಲಿ ಮಾಹಿತಿ ರೆಕಾರ್ಡ್ ಮಾಡಿಕೊಳ್ಳಲಾಯಿತು.
ಕಳೆದ ಮೇ ೪ ರಂದು ಸಂತ್ರಸ್ತ ಮಹಿಳೆ ಕರೆತಂದು ಮಹಜರ್ ನಡೆಸಿದ್ದ ಎಸ್‌ಐಟಿ, ಶುಕ್ರವಾರ ಮಾಜಿ ಸಂಸದನನ್ನು ಕರೆತಂದಿತ್ತು. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೂ ಮಹಜರ್ ನಡೆಸಲಾಯಿತು. ಸತತ 4 ಗಂಟೆ ಕಾಲ ನಡೆಸಿದ ಸ್ಥಳ ಮಹಜರು ಮುಗಿದ ನಂತರ ಪ್ರಜ್ವಲ್ ಅವರನ್ನು ಜೀಪಿನಲ್ಲಿ ಕೂರಿಸಿಕೊಂಡು ಎಸ್‌ಐಟಿ ತಂಡ ವೇಗವಾಗಿ ಬೆಂಗಳೂರು ಕಡೆಗೆ ಹೊರಟಿತು.
ಸಂಸದರ ನಿವಾಸದಿಂದ ಜೀಪ್ ಹತ್ತುವಾಗ ಯಾರಿಗೂ ಮುಖ ತೋರಿಸದೇ ಕತ್ತು ಬಗ್ಗಿಸಿದ್ದ ಪ್ರಜ್ವಲ್ ಪೊಲೀಸ್ ಜೀಪ್ ಹತ್ತಿ ತೆರಳಿದರು. ಈ ದೃಶ್ಯ ನೋಡಲು ಅವರ ಪಕ್ಷದ ಕಾರ್ಯಕರ್ತರು ಕುತೂಹಲದಿಂದ ಕಾದು ನಿಂತಿದ್ದರಾದರೂ ಪ್ರಜ್ವಲ್ ರೇವಣ್ಣರ ಮುಖ ಕಾಣದಿದ್ದರಿಂದ ನಿರಾಸೆಗೊಂಡರು. ಇದೇ ವೇಳೆ ಸಂಸದರ ನಿವಾಸದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.