ಖಾಲಿ ಪುಸ್ತಕದಲ್ಲಿ ಬರೆದದ್ದು ಬದುಕು ರೂಪಿಸುವ ಜ್ಞಾನ

KannadaprabhaNewsNetwork |  
Published : Jun 22, 2024, 12:51 AM IST
ನೋಟ್ ಪುಸತಕ ವಿತರಿಸಲಾಯಿತು | Kannada Prabha

ಸಾರಾಂಶ

ಅರವಿಂದ ಟ್ರಸ್ಟ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ವಿದ್ಯೆಯ ಕಲಿಕೆ ಯಾವತ್ತೂ ಶ್ರದ್ಧೆಯನ್ನು ಬಯಸುತ್ತದೆ ಎಂದು ಆಂತರಿಕ ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಅಭಿಪ್ರಾಯಪಟ್ಟರು.ತಾಲೂಕಿನ ಎಡಜಿಗಳೇಮನೆಯ ಇಕ್ಕೇರಿ ಪ್ರೌಢಶಾಲೆಯಲ್ಲಿ ಅರವಿಂದ ಟ್ರಸ್ಟ್ ಸಂಸ್ಥೆಯು ಒಂಭತ್ತನೆ ತರಗತಿ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾಲಿ ನೋಟ್ ಪುಸ್ತಕದಲ್ಲಿ ಬರೆದದ್ದು ಕೇವಲ ಅಕ್ಷರಗಳಾಗಿರದೆ ಬದುಕು ರೂಪಿಸುವ ಜ್ಞಾನವಾಗಿರುತ್ತದೆ. ಈ ನೋಟ್ ಪುಸ್ತಕವನ್ನು ಶಿಸ್ತುಬದ್ಧವಾಗಿ ಇರಿಸಿಕೊಳ್ಳುವುದು ತುಂಬಾ ಮುಖ್ಯ. ನಮ್ಮ ಸಂಸ್ಥೆ ಈ ವರ್ಷ ಒದಗಿಸಿದ ನೋಟ್ ಪುಸ್ತಕಗಳನ್ನು ಹಾಳು ಮಾಡದೆ, ಪರಿಪೂರ್ಣ ರೀತಿಯಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಬಹುಮಾನ ಕೊಡುವ ಹೊಸ ಯೋಜನೆಯನ್ನು ರೂಪಿಸಿದೆ ಎಂದು ಘೋಷಿಸಿದರು.ಹೆಚ್.ಆರ್. ಸುಮಾ ಮಾತನಾಡಿ, ನಮ್ಮ ಸಂಸ್ಥೆಯ ಉದ್ಯೋಗಿಗಳು ಸೇರಿ ರೂಪಿಸಿರುವ ಅರವಿಂದ ಟ್ರಸ್ಟ್ ವಿಶಿಷ್ಟವಾದುದು. ತಮ್ಮ ವೇತನದಲ್ಲಿ ಒಂದು ಭಾಗವನ್ನು ಉಳಿತಾಯ ಮಾಡಿ ಅದರ ಆಧಾರದಲ್ಲಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡಮಕ್ಕಳಿಗೆ ಉಚಿತ ಪುಸ್ತಕಗಳನ್ನು ವಿತರಿಸುವುದು, ಉದ್ಯೋಗಿಗಳ ಕುಟುಂಬದಲ್ಲಿನ ಸದಸ್ಯರು ಅನಾರೋಗ್ಯಕ್ಕೊಳಗಾದರೆ ಅವರಿಗೆ ಆರ್ಥಿಕ ಬೆಂಬಲ ಕೊಡುವಂತಹ ಕೆಲಸವನ್ನೂ ಈ ಟ್ರಸ್ಟ್ ಮಾಡುತ್ತದೆ. ಹಿಂದಿನ ವರ್ಷ ನಾವು 6 ಸಾವಿರ ನೋಟ್ ಪುಸ್ತಕಗಳನ್ನು ಹಂಚಿದ್ದೆವು. ಈ ಬಾರಿ 10 ಸಾವಿರ ನೋಟ್ ಪುಸ್ತಕಗಳನ್ನು ವಿತರಿಸಲು ಸಜ್ಜಾಗಿದ್ದೇವೆ ಎಂದು ಹೇಳಿದರು.ಇಕ್ಕೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಟಿ.ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ನಾರಾಯಣಮೂರ್ತಿ ಪಿ.ಡಿ., ಅರವಿಂದ ಟ್ರಸ್ಟ್ನ ಎಂ.ಎಸ್. ರಮೇಶ್, ಅರ್ಜುನ್, ಇಕ್ಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಜನೀಶ್ ಸಿ. ಇನ್ನಿತರರು ಇದ್ದರು. ಟಿ.ಎಸ್.ತಿಲಕಾಂಬಾ ಸ್ವಾಗತಿಸಿದರು. ಉಮೇಶ್ ವಂದಿಸಿದರು. ಎಸ್.ಜಿ.ಶ್ರೀಕಾಂತ್ ಹಾಗೂ ರಾಮಚಂದ್ರ ಹೆಗಡೆ ನಿರೂಪಿಸಿದರು.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ