ಮದ್ದೂರು ಕಸಾಪ ಸಮ್ಮೇಳನಾಧ್ಯಕ್ಷೆ ಡಾ.ಕೆಂಪಮ್ಮಗೆ ಆಹ್ವಾನ

KannadaprabhaNewsNetwork |  
Published : Aug 22, 2026, 01:30 AM IST
21ಕೆಎಂಎನ್ ಡಿ11 | Kannada Prabha

ಸಾರಾಂಶ

ಮುಂದಿನ ಸೆ.17ರಂದು ನಡೆಯುವ ಮದ್ದೂರು ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ಕೆಂಪಮ್ಮ ಅವರು ಸಂಘಟಕಿ, ಲೇಖಕಿ ಹಾಗೂ ಸಂಶೋಧಕಿಯಾಗಿ ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ, ಜನಪದ ಕಲಾವಿದೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮುಂದಿನ ಸೆ.17ರಂದು ನಡೆಯುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ಕೆಂಪಮ್ಮ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಆಹ್ವಾನಿಸಲಾಯಿತು.

ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್. ನೇತೃತ್ವದಲ್ಲಿ ಪರಿಷತ್ತಿನ ಪದಾಧಿಕಾರಿಗಳ ತಂಡ ಮಂಡ್ಯದ ಗುತ್ತಲು ಬಡಾವಣೆಯ ಡಾ.ಕೆಂಪಮ್ಮ ನಿವಾಸಕ್ಕೆ ತೆರಳಿ ಶಾಸಕ ಉದಯ ಮಾರ್ಗದರ್ಶನದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಯಿತು.

ಪದಾಧಿಕಾರಿಗಳಾದ ನಿವೃತ್ತ ಪ್ರೊ.ಬೋರೇಗೌಡ, ಡಾ.ಬಿ.ಕೃಷ್ಣ, ಅಪೂರ್ವಚಂದ್ರ, ಆನಂದ್, ರಮೇಶ್, ಕುದರಗುಂಡಿ ಶ್ರೀಧರ, ಅಂಬರ ಹಳ್ಳಿ ಸ್ವಾಮಿ, ಚಂದ್ರಶೇಖರ್, ಬೊಮ್ಮೇಗೌಡ ಮತ್ತಿತರರಿದ್ದರು.ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಕೆಂಪಮ್ಮ ಆಯ್ಕೆ

ಮದ್ದೂರು: ಮುಂದಿನ ಸೆ.17ರಂದು ನಡೆಯುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ಕೆಂಪಮ್ಮ ಅವರು ಸಂಘಟಕಿ, ಲೇಖಕಿ ಹಾಗೂ ಸಂಶೋಧಕಿಯಾಗಿ ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ, ಜನಪದ ಕಲಾವಿದೆಯಾಗಿದ್ದಾರೆ.

ತಾಲೂಕಿನ ಹೆಚ್.ಹೊಸೂರು ಗ್ರಾಮದ ಮರೀಗೌಡ ಮತ್ತು ಜಯಮ್ಮ ದಂಪತಿ ಪುತ್ರಿ ಕೆಂಪಮ್ಮ ಕಳೆದ 25 ವರ್ಷಗಳಿಂದ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುವ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜನಪದ ಸಂಘಟಕಿ, ಲೇಖಕಿ ಹಾಗೂ ಸಂಗ್ರಹಕಾರರಾಗಿ ಸೇವೆ ಸಲ್ಲಿಸುತ್ತಾ, ಕನ್ನಡ ಸಾಹಿತ್ಯ ಮತ್ತು ಜನಪದಕ್ಕೆ ಸಂಬಂಧಿಸಿದ 95ಕ್ಕೂ ಹೆಚ್ಚು ಲೇಖನಗಳನ್ನು ರಾಜ್ಯ, ರಾಷ್ಟ್ರ ಮಟ್ಟದ ಪತ್ರಿಕೆ, ಸಂಚಿಕೆ ಹಾಗೂ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಮಂಡ್ಯ ಜಿಲ್ಲೆಯ ಆಚರಣಾತ್ಮಕ ಜಾನಪದ ವಿಷಯದ ಕುರಿತು ಸಂಶೋಧನೆ ನಡೆಸಿ 2017ರಲ್ಲಿ ಮೈಸೂರು ವಿವಿ ಪಿಎಚ್.ಡಿ ಪದವಿ ಪಡೆದಿದ್ದು, ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.

ಎನ್‌ಎಸ್‌ಎಸ್ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಮೈಸೂರು ವಿವಿ ಉತ್ತಮ ಕಾರ್ಯಕ್ರಮ ಅಧಿಕಾರಿ ಹಾಗೂ ಘಟಕ ಪ್ರಶಸ್ತಿ, ಸರ್ಕಾರದ ರಾಜ್ಯಮಟ್ಟದ ಉತ್ತಮ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಹಾಗೂ ಘಟಕ ಪ್ರಶಸ್ತಿ, 2021ರ ಮಂಡ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ. ಸರ್ಕಾರವು 2024ರಿಂದ ಜನಪದ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರಾಜ್ಯ ಜಾನಪದ ಅಕಾಡೆಮಿ ಸದಸ್ಯರಾಗಿ ನಾಮನಿರ್ದೇಶನ ಮಾಡಿದೆ. ಪ್ರಸ್ತುತ ನಂಜನಗೂಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸಮ್ಮೇಳನ ಆಯೋಜನೆ, ಅಧ್ಯಕ್ಷರ ಆಯ್ಕೆಗೆ ಜಿಲ್ಲಾಧ್ಯಕ್ಷರ ಖಂಡನೆ

ಮದ್ದೂರು:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗಮನಕ್ಕೆ ತಾರದೇ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಇನ್ನೂ ಗೊಂದಲದಲ್ಲಿರುವಾಗಲೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು, ಸಮ್ಮೇಳನ ಅಧ್ಯಕ್ಷರ ಆಯ್ಕೆ ಮಾಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿ.ಹರ್ಷ ಖಂಡಿಸಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ವಿಚಾರ ಇನ್ನೂ ಗೊಂದಲದಲ್ಲಿದೆ. ಈ ಸಂದರ್ಭದಲ್ಲಿ ನಾವೇ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಎಂದು ಕೆ.ಎಸ್.ಸುನಿಲ್ ಕುಮಾರ ಸ್ವಯಂ ಘೋಷಣೆ ಮಾಡಿಕೊಂಡು ಪದಾಧಿಕಾರಿಗಳ ಆಯ್ಕೆ ಮಾಡಿಕೊಂಡು ಸಮ್ಮೇಳನ ನಡೆಸಲು ಮುಂದಾಗಿರುವುದು ಎಷ್ಟು ಔಚಿತ್ಯ ಪೂರ್ಣ ಎಂದು ಪ್ರಶ್ನಿಸಿದ್ದಾರೆ.ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಹಾಲಿ ಇರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೈಜ್ಯ ಘಟಕಕ್ಕೆ ಯಾವುದೇ ಮಾಹಿತಿ ನೀಡದೆ ಸಮ್ಮೇಳನ ನಡೆಸಲು ಸಿದ್ಧತೆ ನಡೆಸಿರುವುದು ರಾಜ್ಯ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಯಮಾವಳಿಗೆ ವಿರುದ್ಧವಾಗಿದೆ. ಸಮ್ಮೇಳನದ ಆತಿಥ್ಯ ಜವಾಬ್ದಾರಿ ಹೊತ್ತಿರುವ ಶಾಸಕ ಕೆ.ಎಂ.ಉದಯ್ ಅವರು ಈ ವಿಚಾರದ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂಟೇಸ್ವಾಮಿ ಕ್ಷೇತ್ರದ ವರಮಹಾಲಕ್ಷ್ಮಿ ಹಬ್ಬಕ್ಕೆ ಧನ ಸಹಾಯ
ನರ್ತಕಿಯರ ಮೇಕಪ್‌ ಕೊಠಡಿಯಾದ ಸಾರ್ವಜನಿಕ ಆಸ್ಪತ್ರೆ..!