ಕನ್ನಡಪ್ರಭ ವಾರ್ತೆ ಮಂಡ್ಯ
ಡಿ.17 ರಂದು ಕನ್ನಡಕ್ಕಾಗಿ ಓಟ ಘೋಷವಾಕ್ಯದಡಿ ಮ್ಯಾರಥಾನ್ ಸ್ಪರ್ಧೆ
ಮಂಡ್ಯ:87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿ, ಅರ್ಥಪೂರ್ಣವಾಗಿ ಜಿಲ್ಲೆಯಲ್ಲಿ ಆಯೋಜಿಸುಲು ಜಿಲ್ಲೆಯ ಜನರು ಸಮ್ಮೇಳನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡಕ್ಕಾಗಿ ಓಟ ಎಂಬ ಘೋಷವಾಕ್ಯದಡಿ ಡಿ.17ರಂದು ಬೆಳಗ್ಗೆ 6 ಗಂಟೆಗೆ ನಗರದಲ್ಲಿ ಮ್ಯಾರಾಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಸಮ್ಮೇಳನ ನಡೆಯುವ ಸ್ಥಳ (ಸ್ಯಾಂಟೋ ಆಸ್ಪತ್ರೆ ಹಿಂಭಾಗ) ದವರೆಗೆ ಮ್ಯಾರಾಥಾನ್ ನಡೆಯಲಿದ್ದು, ಸಮ್ಮೇಳನವನ್ನು ವಿಶಿಷ್ಟಮಯವಾಗಿ ಹಾಗೂ ವಿಶ್ವಮಟ್ಟದಲ್ಲಿ ಹೆಸರು ಮಾಡುವ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಎಲ್ಲಾ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಎಲ್ಲಾ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಕ್ಕಾಗಿ ಓಟ ಎಂಬ ಘೋಷವಾಕ್ಯದಡಿ ಸಂಘಟಿಸುತ್ತಿರುವಸ್ಪರ್ಧೆಯಲ್ಲಿ ಭಾಗವಹಿಸಬೇಕು.ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ಮತ್ತು ತೃತೀಯ ಸ್ಥಾನವನ್ನು ಪಡೆಯುವ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.ಇಂದು ಪಟ್ಟಣಕ್ಕೆ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಆಗಮನ
ಮದ್ದೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ಪ್ರಚಾರ ರಥದ ಮೆರವಣಿಗೆ ಡಿ.13ರಂದು ಪಟ್ಟಣಕ್ಕೆ ಆಗಮಿಸಲಿದೆ. ಬೆಳಗ್ಗೆ 9:30 ಸುಮಾರಿಗೆ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸುವ ಪ್ರಚಾರ ರಥಕ್ಕೆ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಹಾಗೂ ಪುರಸಭೆಯಿಂದ ಸ್ವಾಗತ ಕೋರಲಾಗುವುದು ಎಂದು ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ ತಿಳಿಸಿದ್ದಾರೆ.