ಕನ್ನಡಪ್ರಭ ವಾರ್ತೆ ಅರಸೀಕೆರೆ
ಉದ್ಘಾಟನೆಗೆ ಸಜ್ಜಾಗಿರುವ ಅಯೋಧ್ಯಾ ಶ್ರೀರಾಮ ಮಂದಿರ ಹತ್ತು ಹಲವು ವಿಶೇಷತೆ ಹೊಂದಿರುವುದರ ಜೊತೆಗೆ ಇಲ್ಲಿನ ಪೂಜೆ, ಪುನಸ್ಕಾರಗಳೂ ವಿಶಿಷ್ಟವಾಗಿ ನಡೆಯಲಿವೆ. ಆದರೆ, ರಾಮ ಮಂದಿರದಲ್ಲಿ ಭಕ್ತರಿಗೆ ಹರಕೆ ಸೇವೆಗಳೇ ಇರೋದಿಲ್ಲವಂತೆ. ಭಾರತ ದೇಶ ಮಾತ್ರವಲ್ಲ, ವಿಶ್ವದೆಲ್ಲೆಡೆ ಹಿಂದೂಗಳಿಗೆ ಜ.೨೨ ಅತ್ಯಂತ ಮಹತ್ವದ ದಿನ. ಶತಮಾನಗಳ ಕಾಲ ಹಿಂದೂ ಸಮುದಾಯ ಕಾದು ಕುಳಿತಿದ್ದ ಮಹತ್ವದ ಕಾರ್ಯಕ್ರಮವೊಂದು ಆ ದಿನ ನಡೆಯಲಿದೆ. ಶ್ರೀರಾಮ ಮಂದಿರ ಇನ್ನೇನು ಮುಕ್ತಾಯ ಹಂತದಲ್ಲಿದೆ. ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿ, ಅಂದರೆ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಜ.೨೨ರಂದು ಮುಹೂರ್ತ ನಿಗದಿ ಆಗಿದೆ.
ಪ್ರಧಾನಿ ಮೋದಿ ಅವರು ರಾಮ ಮಂದಿರದಿಂದ ೫೦೦ ಮೀಟರ್ ದೂರದಲ್ಲಿ ಇರುವ ತಾತ್ಕಾಲಿಕ ನೆಲೆಯಿಂದ ಬಾಲ ರಾಮನ ಮೂರ್ತಿಯನ್ನು ತಮ್ಮ ಕೈಗಳಲ್ಲಿ ಹೊತ್ತು ತಂದು ಕಾಲ್ನಡಿಗೆ ಮೂಲಕವೇ ಶ್ರೀರಾಮ ಮಂದಿರದ ಗರ್ಭಗೃಹ ತಲುಪಲಿದ್ದಾರೆ. ಅಭಿಜಿನ್ ಮುಹೂರ್ತದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಮೂಲಕ ಶ್ರೀರಾಮನ ಭವ್ಯ ಮಂದಿರವನ್ನ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.ಗರ್ಭ ಗೃಹದಲ್ಲಿ ಮೂರ್ತಿ ಪ್ರತಿಷ್ಠಾಪನೆ ಆದ ಬೆನ್ನಲ್ಲೇ ಬ್ರಹ್ಮ ಕಲಶೋತ್ಸವ ಕೂಡ ಶುರುವಾಗಲಿದೆ. ಜ.೨೨ರಿಂದ ಮಾರ್ಚ್ ೧೦ರವರೆಗೆ ೪೮ ದಿನಗಳ ಕಾಲ ಬ್ರಹ್ಮ ಕಲಶೋತ್ಸವ ನಡೆಯಲಿದೆ.